ನವದೆಹಲಿ:ಹಣದುಬ್ಬರ,ನಿರುದ್ಯೋಗದ ವಿರುದ್ಧ ಮೇ 25ರಿಂದ 31ರವರೆಗೆ ದೇಶವ್ಯಾಪಿ ಪ್ರತಿಭಟನೆಗೆ ಕರೆ ನೀಡಿರುವ ಎಡಪಕ್ಷಗಳು,ಕೇಂದ್ರದ ಮುಂದೆ ತಮ್ಮ ಬೇಡಿಕೆಗಳ ಪಟ್ಟಿಯನ್ನು ಬಿಡುಗಡೆಗೊಳಿಸಿವೆ.
ಈ ಅವಧಿಯಲ್ಲಿ ದೇಶಾದ್ಯಂತ ಸಂಘಟಿತ ಹೋರಾಟಗಳನ್ನು ನಡೆಸುವಂತೆಯೂ ಪಕ್ಷಗಳು ತಮ್ಮ ಘಟಕಗಳಿಗೆ ನಿರ್ದೇಶ ನೀಡಿವೆ.
ನಿಯಂತ್ರಣವಿಲ್ಲದ ಬೆಲೆಏರಿಕೆಯು ಜನರ ಮೇಲೆ ಈ ಹಿಂದೆಂದೂ ಇಲ್ಲದಷ್ಟು ಹೊರೆಗಳನ್ನು ಹೇರುತ್ತಿದೆ. ಹಸಿವೆಯ ಸಂಕಟ ತೀವ್ರಗೊಳ್ಳುತ್ತಿದ್ದು ಕೋಟ್ಯಂತರ ಜನರು ನರಳುತ್ತಿದ್ದಾರೆ ಮತ್ತು ಕಡುಬಡತನಕ್ಕೆ ತಳ್ಳಲ್ಪಟ್ಟಿದ್ದಾರೆ. ಇವುಗಳೊಂದಿಗೆ ಏರುತ್ತಿರುವ ನಿರುದ್ಯೋಗವೂ ಸೇರಿಕೊಂಡು ಜನರ ಸಂಕಷ್ಟಗಳನ್ನು ಹೆಚ್ಚಿಸುತ್ತಿದೆ. ಕಳೆದೊಂದು ವರ್ಷದಲ್ಲಿ ಪೆಟ್ರೋಲಿಯಂ ಉತ್ಪನ್ನಗಳು ಶೇ.70ರಷ್ಟು, ತರಕಾರಿಗಳು ಶೇ.20ರಷ್ಟು,ಖಾದ್ಯತೈಲಗಳು ಶೇ.23ರಷ್ಟು ಮತ್ತು ದ್ವಿದಳ ಧಾನ್ಯಗಳು ಶೇ.8ರಷ್ಟು ದುಬಾರಿಯಾಗಿವೆ. ಕೋಟ್ಯಂತರ ಭಾರತೀಯರ ಪ್ರಮುಖ ಆಹಾರವಾಗಿರುವ ಗೋದಿಯ ಬೆಲೆ ಶೇ.14ಕ್ಕೂ ಅಧಿಕ ಏರಿಕೆಯಾಗಿದ್ದು,ಜನಸಾಮಾನ್ಯರ ಕೈಗಟಕುತ್ತಿಲ್ಲ. ಗೋದಿ ಖರೀದಿ ಪ್ರಮಾಣ ಕುಸಿದಿದೆ ಎಂದು ಎಡಪಕ್ಷಗಳು ಜಂಟಿ ಹೇಳಿಕೆಯಲ್ಲಿ ತಿಳಿಸಿವೆ.
ಸರಕಾರದ ಗೋದಿ ಖರೀದಿ ನೀತಿಯನ್ನು ಟೀಕಿಸಿರುವ ಅವು,ಕೇಂದ್ರವು ಕಳೆದ ವರ್ಷ ಅರ್ಧಕ್ಕೂ ಕಡಿಮೆ ಗೋದಿಯನ್ನು ಖರೀದಿಸಿದೆ ಎಂದು ತಿಳಿಸಿವೆ.ನರೇಗಾ ಹಂಚಿಕೆಯಲ್ಲಿ ಹೆಚ್ಚಳ,ನಗರ ಪ್ರದೇಶಗಳಲ್ಲಿ ಉದ್ಯೋಗ ಖಾತರಿ ಯೋಜನೆಗಾಗಿ ಕಾನೂನು ಮತ್ತು ಎಲ್ಲ ಖಾಲಿ ಹುದ್ದೆಗಳ ಭರ್ತಿಗಾಗಿಯೂ ಅವು ಆಗ್ರಹಿಸಿವೆ.