ವಾರಾಣಾಸಿ: ಜ್ಞಾನವಾಪಿ ಶೃಂಗಾರ ಗೌರಿ ಸಂಕೀರ್ಣ ಪ್ರಕರಣದ ನಿರ್ವಹಣೆಯ ಸಂಬಂಧ ಜಿಲ್ಲಾ ನ್ಯಾಯಾಲಯವು ಮೇ 26 ರಂದು ವಿಚಾರಣೆಯನ್ನು ನಿಗದಿಪಡಿಸಿದೆ.
ಜ್ಞಾನವಾಪಿ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ಹಿಂದು ಹಾಗೂ ಮುಸ್ಲಿಮರು ಸಲ್ಲಿಸಿರುವ ಅರ್ಜಿಗಳ ಪೈಕಿ ಯಾವುದನ್ನು ಮೊದಲು ವಿಚಾರಣೆ ನಡೆಸಬೇಕು ಎಂಬ ಬಗ್ಗೆ ಮೇ 26ಕ್ಕೆ ವಿಚಾರಣೆ ನಡೆಸುವುದಾಗಿ ವಾರಾಣಸಿಯ ಜಿಲ್ಲಾ ನ್ಯಾಯಾಲಯ ತಿಳಿಸಿದೆ.
ಸುಪ್ರೀಂ ಕೋರ್ಟ್‌ನ ನಿರ್ದೇಶನದಂತೆ ಜಿಲ್ಲಾ ನ್ಯಾಯಾಧೀಶ ಎ ಕೆ ವಿಶ್ವೇಶ್ ನೇತೃತ್ವದ ಪೀಠವು ವಿಚಾರಣೆ ನಡೆಸಲಿದೆ ಎಂದು ಜಿಲ್ಲಾ ಸರ್ಕಾರಿ ವಕೀಲ ರಾಣಾ ಸಂಜೀವ್ ಸಿಂಗ್ ಹೇಳಿದ್ದಾರೆ. ನ್ಯಾಯಾಲಯವು ಜ್ಞಾನವಾಪಿ ಮಸೀದಿ ಆವರಣದ ವೀಡಿಯೊಗ್ರಫಿ ಸಮೀಕ್ಷೆಯ ವರದಿಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಹಿಂದೂ ಮತ್ತು ಮುಸ್ಲಿಂ ಎರಡೂ ಕಡೆಯವರಿಗೆ ನ್ಯಾಯಾಲಯವು ಒಂದು ವಾರದ ಸಮಯವನ್ನು ನೀಡಿದೆ ಎಂದು ಸಿಂಗ್ ಹೇಳಿದರು.
ಕೆಳ ನ್ಯಾಯಾಲಯದ ಆದೇಶದ ವೀಡಿಯೊಗ್ರಫಿ ಸಮೀಕ್ಷೆಯ ವೇಳೆ ಜ್ಞಾನವಾಪಿ ಮಸೀದಿ ಆವರಣದಲ್ಲಿ ಕಂಡುಬಂದಿದೆ ಎಂದು ಹೇಳಲಾದ 'ಶಿವಲಿಂಗ'ವನ್ನು ಪೂಜಿಸಲು ಅನುಮತಿ ಕೋರಿ ಹೊಸ ಮನವಿಯನ್ನು ಸಹ ಸಲ್ಲಿಸಲಾಗಿದೆ.
ಜ್ಞಾನವಾಪಿ ಮಸೀದಿ ಪ್ರಕರಣದಲ್ಲಿ ತಾನು ಮಧ್ಯಪ್ರವೇಶಿಸುವುದಿಲ್ಲ ಎಂದು ಹೇಳಿದ್ದ ಸುಪ್ರೀಂ ಕೋರ್ಟ್, ಪ್ರಕರಣವನ್ನು ಕೆಳ ನ್ಯಾಯಾಲಯಕ್ಕೆ ವರ್ಗಾಯಿಸಿ, ಇದು ತುಂಬಾ ಸೂಕ್ಷ್ಮ ಪ್ರಕರಣ. ಹೀಗಾಗಿ ಹಿರಿಯ ಮತ್ತು ಅನುಭವಿಗಳ ಅಗತ್ಯವಿದೆ ಎಂದು ಹೇಳಿತ್ತು. ಇದಾದ ಕೆಲ ದಿನಗಳ ಬಳಿಕ ವಾರಣಾಸಿ ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆ ಪ್ರಾರಂಭವಾಗಿತ್ತು. ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಎ ಕೆ ವಿಶ್ವೇಶ್, ಹಿಂದೂ ಮತ್ತು ಮುಸ್ಲಿಂ ಎರಡೂ ಕಡೆಯ ವಾದ ಪ್ರತಿವಾದಗಳನ್ನು ಆಲಿಸಿದರು.
ಅಂಜುಮನ್ ಇಂತೇಜಾಮಿಯಾ ಮಸೀದಿ ಸಮಿತಿಯ ವಕೀಲ ಮೊಹಮ್ಮದ್ ತೌಹಿದ್ ಖಾನ್ ಸಿಪಿಸಿ (ಸಿವಿಲ್ ಪ್ರೊಸೀಜರ್ ಕೋಡ್) ಆದೇಶ 7 ಮತ್ತು ನಿಯಮ 11ರ ಅಡಿಯಲ್ಲಿ ರಿಟ್ ಅನ್ನು ನಿರ್ವಹಿಸಲು ಸಾಧ್ಯವಿಲ್ಲ. ಆದ್ದರಿಂದ ಅದನ್ನು ವಜಾಗೊಳಿಸಬೇಕು ಎಂದು ವಾದಿಸಿದರು.
ಕಾಶಿ ವಿಶ್ವನಾಥ ದೇಗುಲದ ಮಹಾಂತ್ ಡಾ.ಕುಲಪತಿ ತಿವಾರಿ ಅವರು ಶಿವಲಿಂಗದ ನಿಯಮಿತ ಪೂಜೆಗಾಗಿ ಹೊಸ ಅರ್ಜಿಯನ್ನು ಸಲ್ಲಿಸಿದ್ದಾರೆ. ಇದು ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಕಂಡುಬಂದಿದೆ ಎಂದು ಅವರು ಹೇಳಿದರು.
ಮೇ 16ರಂದು, ಹಿಂದೂ ಅರ್ಜಿದಾರರನ್ನು ಪ್ರತಿನಿಧಿಸುವ ವಕೀಲರು ನ್ಯಾಯಾಲಯದ ಕಡ್ಡಾಯ ವೀಡಿಯೊಗ್ರಫಿ ಸಮೀಕ್ಷೆಯ ಸಮಯದಲ್ಲಿ ಶಿವಲಿಂಗ ಕಂಡುಬಂದಿದೆ ಎಂದು ಹೇಳಿದ ನಂತರ ಕೆಳ ನ್ಯಾಯಾಲಯವು ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಒಂದು ಜಾಗವನ್ನು ಮುಚ್ಚಲು ಜಿಲ್ಲಾಡಳಿತಕ್ಕೆ ಸೂಚಿಸಿತ್ತು. ಮಸೀದಿ ಆಡಳಿತ ಸಮಿತಿಯ ವಕ್ತಾರರು ಇದನ್ನು ವಿರೋಧಿಸಿದ್ದು ಇದು ಶಿವಲಿಂಗವಲ್ಲ ಅದು "ಕಾರಂಜಿ"ಯ ಭಾಗವಾಗಿದೆ ಎಂದು ಹೇಳಿದ್ದರು.