ಗುಜರಾತ್: ಇಪ್ಪತ್ತಾರು ದೇಶಗಳಲ್ಲಿ ಏಕಾಂಗಿಯಾಗಿ ಬೈಕ್ ಮೂಲಕ ಪ್ರಯಾಣ ನಡೆಸಿ ಯೂರೋಪ್‌ನ ಮೈಕೊರೆಯುವ ಚಳಿ ಮತ್ತು ಅರೇಬಿಯಾದ ಮರುಭೂಮಿಯ ಕುಲುಮೆಯ ಬಿಸಿಯಲ್ಲಿ ಹಾಯ್ದು ಮಣ್ಣು ಉಳಿಸಿ ಅಭಿಯಾನ ಕೈಗೊಂಡಿರುವ ಈಶ ಪ್ರತಿಷ್ಠಾನದ ಸಂಸ್ಥಾಪಕ ಸದ್ಗುರು ಇಂದು ಭಾರತಕ್ಕೆ ಮರಳಿದ್ದು, ಅವರು ಗುಜರಾತ್‌ನ ಜಾಮ್‌ನಗರದ ಬಂದರಿನಲ್ಲಿ ಬಂದಿಳಿಯುವ ಮೂಲಕ ಸ್ವದೇಶಕ್ಕೆ ಪದಾರ್ಪಣೆ ಮಾಡಿದರು.
ಯೂರೋಪ್, ಮಧ್ಯ ಏಷ್ಯಾ ಮತ್ತು ಮಧ್ಯಪೂರ್ವ ದೇಶಗಳಲ್ಲಿ 'journey for soil' ಅಭಿಯಾನದ ಪಯಣ ಅಭೂತಪೂರ್ವ ಸ್ವೀಕೃತಿ ಮತ್ತು ಯಶಸ್ಸು ಕಂಡಿದೆ. ಸದ್ಗುರು ಅವರು ಓಮನ್ ದೇಶದ ಪೋರ್ಟ್ ಸುಲ್ತಾನ್ ಕಾಬೂಸ್‌ನಿಂದ ಹೊರಟು ಹಿಂದೂ ಮಹಾಸಾಗರದಲ್ಲಿ ಮೂರು ದಿನಗಳ ಸಮುದ್ರಯಾನ ಮಾಡಿದ್ದರು.
ಭಾರತೀಯ ನೌಕಾಪಡೆಯು ತಮ್ಮ ಸಂಗೀತ ವಾದನದಲ್ಲಿ Save soil anthem ಗೀತೆಯೊಂದಿಗೆ ಸದ್ಗುರು ಅವರಿಗೆ ಅಭೂತಪೂರ್ವ ಸ್ವಾಗತ ನೀಡಿತು. ಮಣ್ಣು ಉಳಿಸಿ ಅಭಿಯಾನದ ಆತ್ಮೋದ್ದೇಶವನ್ನು ಕಟ್ಟಿಕೊಡುವ 'ಭೂಮಾತೆಯ ಕರೆ, ಭೂಮಾತೆಯ ಸವಾಲು, ಭೂಮಾತೆಯ ಘರ್ಜನೆ, ಮಣ್ಣು ಉಳಿಸಿ ಮರ ನೆಡಿ ಎಂಬ ಘೋಷಣೆಗಳೊಂದಿಗೆ ಆಗಮಿಸಿದ್ದ ಜನಸ್ತೋಮ ಸದ್ಗುರು ಅವರನ್ನು ಸ್ವಾಗತಿಸಿತು. ಸದ್ಗುರು ಅವರು ಭರತ ಭೂಮಿಯಲ್ಲಿ 'ಮಣ್ಣು ಉಳಿಸಿ' ಅಭಿಯಾನದ ಆರಂಭದ ದ್ಯೋತಕವಾಗಿ ಸಸಿಯೊಂದನ್ನು ನೆಟ್ಟರು.
ವಿವಿಧ ರಾಜ್ಯಗಳಿಂದ ಬಂದು ಸೇರಿದ್ದ ಸಾವಿರಾರು ಉತ್ಸಾಹಿಗಳ ಮುಗಿಲು ಮುಟ್ಟುವ ಘೋಷಣೆಗಳ ಕಲರವ, ಮೈನವಿರೇಳಿಸುವ ಡೋಲು ವಾದನ ಮತ್ತು ರೋಮಾಂಚಕ ಜಾನಪದ ಪ್ರದರ್ಶನಗಳ ನಡುವೆ ಸದ್ಗುರು ಅವರು ನೆರೆದಿದ್ದ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿ, 'ಮಣ್ಣು ಉಳಿಸಿ' ಅಭಿಯಾನದ ತೀವ್ರಗತಿಯನ್ನು ಕಾಪಾಡಿ ಮುಂದುವರಿಸುವಂತೆ ಕರೆಕೊಟ್ಟರು. ಕೊನೇಪಕ್ಷ ಮುಂದಿನ 30 ದಿನಗಳ ಕಾಲ ನೀವು ನಿಮ್ಮ ಧ್ವನಿಯನ್ನು ಮುಗಿಲು ಮುಟ್ಟುವಂತೆ ಏರಿಸಬೇಕು, ಕೇವಲ ಒಂದು ದಿನದ ಘೋಷಣೆ ಕೂಗುವುದಲ್ಲ. ಜಗತ್ತಿನ ಎಲ್ಲ ಸರ್ಕಾರಗಳೂ ಮಣ್ಣಿನ ಪುನರುಜ್ಜೀವನ ಮಾಡಲು ನೀತಿ-ನಿರೂಪಣೆಯ ಬದಲಾವಣೆ ಮಾಡಿದೆ ಎಂದು ತಿಳಿದು ಬರುವ ತನಕ, ನಿರಂತರವಾಗಿ ಈ ಅಭಿಯಾನದ ಘೋಷವನ್ನು ಪ್ರತಿದಿನ 15-20 ನಿಮಿಷಗಳ ಕಾಲ ಎಲ್ಲರಿಗೂ ಕೇಳುವಂತೆ ಮಾಡಿ ಎಂದು ಕರೆ ನೀಡಿದರು.
ನಮ್ಮ ಅಂಗೈನಲ್ಲಿ ಇರುವ ಪವರ್‌ಹೌಸ್ ಆಗಿರುವ ಮೊಬೈಲ್ಫೋನ್ಗಳನ್ನು ಹಿಡಿದೇ ಇರುತ್ತೇವೆ ಎಂಬುದನ್ನು ನೆನಪಿಸುತ್ತ, ಪ್ರತಿಯೊಬ್ಬರೂ ಸೋಷಿಯಲ್ ಮೀಡಿಯಾ ಬಳಸಿ ಮಣ್ಣಿನ ಬಗ್ಗೆ ಮಾತನಾಡಬೇಕು ಎಂದರು. ಇಂತಹ ಶಕ್ತಿಯುವ ಸಾಧನ ಕೈಯಲ್ಲಿರುವಾಗ ಈ ಅಭಿಯಾನದಲ್ಲಿ ಭಾಗವಹಿಸಿ ಯಶಸ್ವಿಯಾಗುವಂತೆ ಮಾಡಬೇಕು ಎಂದು ಹೇಳಿದರು.
ಜಾಮ್‌ನಗರದ ಜಾಮ್‌ಸಾಹಿಬ್‌ನ ಪ್ರತಿನಿಧಿ ಎಕ್ತಬಾ ಸೋಧಾ ಅವರ ಜೊತೆ ಹಲವು ಧಾರ್ಮಿಕ ಮತ್ತು ರಾಜಕೀಯ ನೇತಾರರು, ಭಾರತೀಯ ನೌಕಾಪಡೆಯ ಕಮಾಂಡಿಂಗ್ ಆಫೀಸರ್‌ಗಳು ಮತ್ತು ಭಾರತೀಯ ವಾಯುಪಡೆಯ ಅಧಿಕಾರಿಗಳು ಸದ್ಗುರು ಅವರನ್ನು ಬಂದರಿನಲ್ಲಿ ಸ್ವಾಗತಿಸಿದರು.
ಈ ಚಾರಿತ್ರಿಕ ಕ್ಷಣದಲ್ಲಿ ಭಾಗಿಯಾಗುವ ಅವಕಾಶ ತನ್ನ ಹೆಮ್ಮೆ ಮತ್ತು ಗೌರವ ಎಂದು ಎಕ್ತಬಾ ಸೋಧಾ ಹೇಳಿದರು. ನೀತಿ ನಿರೂಪಣೆಯಲ್ಲಿ ಅವಶ್ಯಕ ಬದಲಾವಣೆ ತರುವಂತೆ ತಿಳುವಳಿಕೆ ನೀಡುವ ಜತೆಗೆ ಸದ್ಗುರು ಪ್ರಭಾವ ಬೀರುತ್ತಿದ್ದಾರೆ. ಮಣ್ಣಿನ ರಕ್ಷಣೆ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ವಿಶೇಷ ಅಧಿಸೂಚನೆಯ ಮೇರೆಗೆ ರಾಜಪರಿವಾರದ ಆಹ್ವಾನದ ಮೇರೆಗೆ ನಾಗರಿಕರೊಬ್ಬರು ಈ ಸರಕು ಬಂದರಿನಲ್ಲಿ ಈ ದಿನ ಬಂದಿಳಿಯುತ್ತಿರುವುದು ಜಾಮ್‌ನಗರದ ಇತಿಹಾಸದಲ್ಲಿಯೇ ಇದು ಎರಡನೆಯ ಬಾರಿ ಎನ್ನುವುದು ಅತ್ಯಂತ ಮಹತ್ವದ ಸಂಗತಿ ಎಂದರು. ತಮ್ಮೊಂದಿಗೆ ಟಗ್‌ಬೋಟ್‌ನಲ್ಲಿ ಬಂದ ತಮ್ಮ ಮೋಟಾರ್ ಸೈಕಲ್‌ನತ್ತ ನಡೆದು ಹೋಗುತ್ತ ಸದ್ಗುರು, ಅಲ್ಲಿ ಪ್ರದರ್ಶನ ನೀಡುತ್ತಿದ್ದ ಕಲಾವಿದರತ್ತ ತಮ್ಮ ಗೌರವ ಸೂಚಿಸಿದರು.
ಸದ್ಗುರು ಅವರ 100 ದಿನಗಳ 30,000 ಕಿಲೋಮೀಟರ್‌ಗಳ ಮೊಟಾರ್ ಬೈಕ್ ಪಯಣದ 'journey for soil' ಮಣ್ಣನ್ನು ಅಳಿವಿನಿಂದ ಉಳಿಸಿ ಎಂಬ ಜಾಗತಿಕ ಅಭಿಯಾನ ಈ ವರ್ಷದ ಮಾರ್ಚ್ 21ರಂದು ಲಂಡನ್‌ನಿಂದ ಆರಂಭವಾಗಿತ್ತು. ಇದು ಜೂನ್ ತಿಂಗಳ ಕೊನೆಯಲ್ಲಿ ಕಾವೇರಿ ನದಿಯ ಕೊಳ್ಳದಲ್ಲಿ ಸಂಪನ್ನವಾಗಲಿದೆ.
ಭಾರತದಲ್ಲಿ ಕೃಷಿ ಭೂಮಿಯ ಸರಾಸರಿ ಸಾವಯವ ಇಂಗಾಲದ ಪ್ರಮಾಣವು ಶೇ. 0.68 ಮಾತ್ರ ಇದ್ದು ದೇಶವು ಮರುಭೂಮೀಕರಣದ ಮತ್ತು ಮಣ್ಣಿನ ಸಂಪೂರ್ಣ ವಿನಾಶದ ಅಪಾಯದಲ್ಲಿದೆ ಎಂದು ಅಂದಾಜಿಸಲಾಗಿದೆ. ನಮ್ಮ ದೇಶದ ಶೇ. 30 ಫಲವತ್ತಾದ ಮಣ್ಣು ಈಗಾಗಲೇ ಬರಡಾಗಿದ್ದು, ಯಾವುದೇ ಕೃಷಿ ಉತ್ಪನ್ನ ತೆಗೆಯಲಾರದ ಸ್ಥಿತಿಯಲ್ಲಿದೆ. ಜಾಗತಿಕವಾಗಿಯೂ ಶೇ.25 ಫಲವತ್ತಾದ ಮಣ್ಣು ಮರುಭೂಮಿ ಆಗಿಬಿಟ್ಟಿದೆ ಎಂದು ಅಂದಾಜು ಮಾಡಲಾಗಿದೆ. ಈಗ ಘಟಿಸುತ್ತಿರುವ ಪ್ರಮಾಣದಲ್ಲಿಯೇ ಮಣ್ಣು ಸತ್ವಹೀನವಾಗುವುದು ಮುಂದುವರಿದರೆ, ಪ್ರಪಂಚದ ಶೇ.90 ಭೂಮಿಯು 2050ನೇ ವರ್ಷಕ್ಕೆ ಮರುಭೂಮಿಯೇ ಆಗಿಬಿಡುತ್ತದೆ ಎಂದು ವಿಶ್ವಸಂಸ್ಥೆ ತೀವ್ರವಾಗಿ ಎಚ್ಚರಿಸಿದೆ. ಇದು ಕೇವಲ ಮೂರು ದಶಕಗಳಷ್ಟು ಮಾತ್ರವೇ ದೂರವಿದೆ.
ತೈಲವು ಜಗತ್ತಿನಿಂದ ಕಾಣೆಯಾಗುವುದು ಊಹೆ ಮಾಡಲಾರದಷ್ಟು ಮಟ್ಟಿಗೆ ಪರಿಸರ, ಆರ್ಥಿಕ ಮತ್ತು ಸಾಮಾಜಿಕ ದುರಂತಕ್ಕೆ ದಾರಿ ಮಾಡಿಕೊಡಬಹುದು. ಇದರಲ್ಲಿ, ತೀವ್ರಗೊಳ್ಳುತ್ತಿರುವ ಹವಾಮಾನ ಬದಲಾವಣೆ, ಆಹಾರ ಮತ್ತು ನೀರಿನ ಜಾಗತಿಕ ಮಟ್ಟದ ಕೊರತೆ, ಅತ್ಯಂತ ಕ್ರೂರ ಸ್ವರೂಪದ ನಾಗರಿಕ ಕಲಹ, ಪ್ರತಿಯೊಂದು ರಾಷ್ಟ್ರದ ಸಾಂಸ್ಕೃತಿಕ ಪಟಲ ಮತ್ತು ರಕ್ಷಣೆಯನ್ನು ಹಾಳುಮಾಡಬಲ್ಲ ರೀತಿಯ, ಜನರ ಖಂಡಾಂತರ ವಲಸೆಗಳೂ ಸೇರಿವೆ.