HEALTH TIPS

27 ಮಂದಿ ಬಲಿ ಪಡೆದಿದ್ದ ಮುಂಡ್ಕಾ ಅಗ್ನಿ ದುರಂತ ಪ್ರಕರಣ: ಪರಾರಿಯಾಗಿದ್ದ ಕಟ್ಟಡ ಮಾಲೀಕನ ಬಂಧನ

         ನವದೆಹಲಿ: 27 ಮಂದಿಯ ಸಜೀವ ದಹನಕ್ಕೆ ಕಾರಣವಾದ ಪಶ್ಚಿಮ ದೆಹಲಿಯ ಮುಂಡ್ಕಾ ಮೆಟ್ರೋ ನಿಲ್ದಾಣದ ಬಳಿಯ ಕಟ್ಟಡದಲ್ಲಿ ಸಂಭವಿಸಿದ ಬೆಂಕಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ, ಪೊಲೀಸರು ಕಟ್ಟಡದ ಮಾಲೀಕನನ್ನು ಬಂಧನಕ್ಕೊಳಪಡಿಸಿದ್ದಾರೆಂದು ಭಾನುವಾರ ತಿಳಿದುಬಂದಿದೆ.

         ಶುಕ್ರವಾರ ಸಂಜೆ ನಾಲ್ಕು ಅಂತಸ್ತಿನ ಕಟ್ಟಡವೊಂದರಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, 27 ಮಂದಿ ಸಜೀವ ದಹನವಾಗಿದ್ದರು.

             ಪ್ರಕರಣ ಸಂಬಂಧ ಕಂಪನಿಯ ಮಾಲೀಕರಾಗಿದ್ದ ಇಬ್ಬರನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದರು. ಇದೀಗ ಕಟ್ಟಡದ ಮಾಲೀಕ ಮನೀಶ್ ಲಕ್ರಾ ಎಂಬುವವರನ್ನು ಬಂಧನ್ಕೊಳಪಡಿಸಿದ್ದಾರೆಂದು ತಿಳಿದುಬಂದಿದೆ.

          ಅಗ್ನಿ ದುರಂತ ಸಂಭವಿಸಿದ ಕಟ್ಟಡವು ನಾಲ್ಕು ಅಂತಸ್ತಿನ ವಾಣಿಜ್ಯ ಕಟ್ಟಡವಾಗಿದ್ದು, ಇಲ್ಲಿ ಕಂಪನಿಗಳಿಗೆ ಕಚೇರಿ ಸ್ಥಳವನ್ನು ಒದಗಿಸಲಾಗಿತ್ತು. ಸಿಸಿಟಿವಿ ಕ್ಯಾಮೆರಾಗಳು ಮತ್ತು ರೂಟರ್ ತಯಾರಿಕಾ ಕಂಪನಿಯ ಕಚೇರಿ ಮೊದಲನೇ ಮಹಡಿಯಲ್ಲಿದ್ದು, ಆ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಘಟನೆ ಸಂಬಂಧ ಕಂಪನಿಯ ಮಾಲೀಕರನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದರು.

         ಅಗ್ನಿಶಾಮಕ ಇಲಾಖೆಯಿಂದ ಸುರಕ್ಷತಾ ಅನುಮತಿ ಪಡೆಯದೇ ಮಾಲೀಕ ಕಟ್ಟಡ ನಿರ್ಮಿಸಲಾಗಿದೆ ಎಂಬ ವಿಚಾರ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಪೊಲೀಸರು ಕಟ್ಟಡ ಮಾಲೀಕನಿಗಾಗಿ ಹುಡುಕಾಟ ಆರಂಭಿಸಿದ್ದರು. ಇದರಂತೆ ಇಂದು ಕಟ್ಟಡ ಮಾಲೀಕನನ್ನು ಬಂಧನಕ್ಕೊಳಪಡಿಸಿದ್ದಾರೆ.

               ಕಟ್ಟಡದ ಮಾಲೀಕನಿಗಾಗಿ ದೆಹಲಿ ಹಾಗೂ ಹರಿಯಾಣದಲ್ಲಿ ಹಲವೆಡೆ ದಾಳಿ ನಡೆಸಲಾಗಿತ್ತು. ಈ ವೇಳೆ ಕಟ್ಟಡ ಮಾಲೀಕನನ್ನು ಬಂಧನಕ್ಕೊಳಪಡಿಸಲಾಗಿದೆ. ಘಟನೆಯಲ್ಲಿ 19 ಮಂದಿ ನಾಪತ್ತೆಯಾಗಿದ್ದು, ಅವರನ್ನು ಪತ್ತೆ ಮಾಡುವ ಕಾರ್ಯ ಮುಂದುವರೆದಿದೆ  ಎಂದು ಡಿಸಿಪಿ ಸಮೀರ್ ಶರ್ಮಾ ಅವರು ಹೇಳಿದ್ದಾರೆ.

            ನಾಪತ್ತೆಯಾಗಿರುವ ಪ್ರೀತಿಪಾತ್ರರ ಕುರಿತು ಮಾಹಿತಿಗಾಗಿ ಕಾದು ಕುಳಿತಿರುವ ಕುಟುಂಬಸ್ಧರು...
            ಈ ನಡುವೆ ಘಟನೆ ಬಳಿಕ ನಾಪತ್ತೆಯಾಗಿರುವ ತಮ್ಮ ಪ್ರೀತಿಪಾತ್ರರ ಕುರಿತ ಮಾಹಿತಿಗಾಗಿ ಕುಟುಂಬಸ್ಥರು, ಸ್ನೇಹಿತರು ಸಂಜಯ್ ಗಾಂಧಿ ಮೆಮೋರಿಯಲ್ ಆಸ್ಪತ್ರೆ ಎದುರು ಕಾದು ಕುಳಿತಿರುವ ದೃಶ್ಯಗಳು ಕಂಡು ಬಂದಿದೆ.

           ದುರ್ಘಟನೆಯಲ್ಲಿ ಸಾವನ್ನಪ್ಪಿರುವ 27 ಮಂದಿ ಪೈಕಿ 21 ಮಂದಿ ಮಹಿಳೆಯರೇ ಆಗಿದ್ದು, 19 ಮಂದಿಯ ಮೃತದೇಹಗಳ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ.

          ನನ್ನ ಸಹೋದರಿ ನಾಪತ್ತೆಯಾಗಿದ್ದಾಳೆ. ಮೃತದೇಹಗಳು ಗುರುತು ಹಿಡಿಯದಷ್ಟು ಸುಟ್ಟು ಕರಲಾಗಿವೆ. ಮೃತದೇಹಗಳ ಡಿಎನ್ಎ ಪರೀಕ್ಷೆ ನಡೆಸಲಾಗುತ್ತಿದ್ದು, ಆಸ್ಪತ್ರೆ ವರದಿಗಾಗಿ ಕಾಯಲಾಗುತ್ತಿದೆ. ನನ್ನ ಮೂವರೂ ಸಹೋದರಿಯರೂ ನಾಪತ್ತೆಯಾಗಿದ್ದಾರೆ. ನನ್ನ ಒಬ್ಬಳು ಸಹೋದರಿ ಕ್ಯಾಮೆರಾ ಪ್ಯಾಕೇಜಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಳು. ಸಂಜೆ 4.30ರ ಸುಮಾರಿಗೆ ತಂದೆ ದೂರವಾಣಿ ಕರೆ ಮಾಡಿ, ಅಗ್ನಿ ದುರಂತ ಸಂಭವಿಸಿರುವ ಕುರಿತು ಮಾಹಿತಿ ನೀಡಿದ್ದರು. ಭೀತಿಗೊಳಗಾಗಿ ನಾವು ಸ್ಥಳಕ್ಕೆ ತೆರಳಿದ್ದೆವು. ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಹುಡುಕಾಟ ನಡೆಸಿದೆವು. ಸರ್ಕಾರಿ ಆಸ್ಪತ್ರೆಯೊಂದು ಮೃತದೇಹಗಳನ್ನು ಸಂಜಯ್ ಗಾಂಧಿ ಮೆಮೋರಿಯಲ್ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿಸಿತು. ಆದರೆ, ಮೃತದೇಹಗಳ ಪತ್ತೆ ಮಾಡಲು ಸಾಧ್ಯವಾಗುತ್ತಿಲ್ಲ. ಇದೀಗ ಡಿಎನ್ಎ ವರದಿಗಾಗಿ ಕಾಯುತ್ತಿದ್ದೇವೆಂದು ಹೇಳಿದ್ದಾರೆ.

         ಇದೇ ವೇಳೆ ಅಧಿಕಾರಿಗಳ ವಿರುದ್ಧ ಕಿಡಿಕಾರಿರುವ ಅವರು, ಮೃತದೇಹಗಳನ್ನು ಆಸ್ಪತ್ರೆಗೆ ಸಾಗಿಸುವಾಗ ಅಧಿಕಾರಿಗಳು, ಗೌರವಯುತ ರೀತಿಯಲ್ಲಿ ನಡೆದುಕೊಂಡಿಲ್ಲ. ಕಸದ ರೀತಿಯಲ್ಲಿ ಮೃತದೇಹಗಳನ್ನು ಆಸ್ಪತ್ರೆಗೆ ಕರೆತಂದಿದ್ದಾರೆ. ಸತ್ತ ವ್ಯಕ್ತಿಗಳಿಗೆ ಗೌರವ ಇಲ್ಲವೆಂದು ತಿಳಿದಿದ್ದಾರೆಯೇ? ಒಂದೊಂದು ಬ್ಯಾಗ್ ನಲ್ಲಿ 2-3 ಮೃತದೇಹಗಳನ್ನು ಇರಿಸಿ, ಮೃತದೇಹಗಳ ಗುರುತಿಸುವಂತೆ ತಿಳಿಸುತ್ತಿದ್ದಾರೆ. ಈ ರೀತಿ ಗುರುತಿಸುವುದು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries