ವಾರಾಣಸಿ: ಬಾಬರಿ ಮಸೀದಿ ಪ್ರಕರಣದ ಬಳಿಕ ಅಷ್ಟೇ ಕುತೂಹಲ ಕೆರಳಿಸಿರುವ ಜ್ಞಾನವಾಪಿ ಮಸೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಾರಣಾಸಿ ಕೋರ್ಟ್ ಅಡ್ವೊಕೇಟ್ ಕಮಿಷನರ್ ಅಜಯ್ ಮಿಶ್ರಾ ಅವರನ್ನು ವಜಾಗೊಳಿಸಿದೆ.
ವಿವಾದಿತ ಮಸೀದಿಯ ವಿಡಿಯೊ ಚಿತ್ರೀಕರಣ ಮತ್ತು ಸಮೀಕ್ಷೆಗೆ ಆದೇಶ ನೀಡಿದ್ದ ವಾರಾಣಸಿಯ ನ್ಯಾಯಾಲಯವು ಮಂಗಳವಾರ ಅಸಹಕಾರದ ಆಧಾರದ ಮೇಲೆ ಅಡ್ವೊಕೇಟ್ ಕಮಿಷನರ್ ಅಜಯ್ ಮಿಶ್ರಾ ಅವರನ್ನು ವಜಾಗೊಳಿಸಿದ್ದು, ಸಮೀಕ್ಷಾ ವರದಿ ಸಲ್ಲಿಸಲು ಆಯೋಗಕ್ಕೆ ನ್ಯಾಯಾಲಯ ಇನ್ನೆರಡು ದಿನಗಳ ಕಾಲಾವಕಾಶವನ್ನೂ ನೀಡಿದೆ. ಈ ಹಿಂದೆ ಮೇ 17ರ ಒಳಗೆ ವರದಿ ನೀಡಬೇಕು ಎಂದು ಕೋರ್ಟ್ ಹೇಳಿತ್ತು.
‘ಅಜಯ್ ಮಿಶ್ರಾ ಅವರನ್ನು ನ್ಯಾಯಾಲಯವು ವಜಾಗೊಳಿಸಿದೆ’ ಎಂದು ಸಹಾಯಕ ವಕೀಲ ಕಮಿಷನರ್ ಅಜಯ್ ಪ್ರತಾಪ್ ಸಿಂಗ್ ಸುದ್ದಿಸಂಸ್ಥೆಗಳಿಗೆ ಮಾಹಿತಿ ನೀಡಿದ್ದಾರೆ.
ಅಸಹಕಾರದ ಆಧಾರದ ಮೇಲೆ ಮಿಶ್ರಾ ಅವರನ್ನು ತೆಗೆದುಹಾಕಲಾಗಿದ್ದು, ಅಜಯ್ ಮಿಶ್ರಾ ಅವರು ಸಮೀಕ್ಷೆಗೆ ಸಂಬಂಧಿಸಿದ ಮಾಹಿತಿಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದರು ಎಂದು ಕೆಲ ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.
ಈ ಹಿಂದೆ ಅಜಯ್ ಕುಮಾರ್ ಮಿಶ್ರಾ ಅವರನ್ನು ಅಡ್ವೊಕೇಟ್ ಕಮಿಷನರ್ ಸ್ಥಾನದಿಂದ ಕೈಬಿಡಬೇಕು ಎಂದು ಕೋರಿದ್ದ ಮುಸಲ್ಮಾನರ ಅರ್ಜಿಯನ್ನು ಇದೇ ಕೋರ್ಟ್ ತಿರಸ್ಕರಿಸಿತ್ತು. ಅಲ್ಲದೆ, ಮಿಶ್ರಾ ಅವರಿಗೆ ನೆರವಾಗಲು ಹೆಚ್ಚುವರಿ ಕಮಿಷನರ್ ಮತ್ತು ಸಹಾಯಕ ಕಮಿಷನರ್ ಅವರನ್ನು ಕೋರ್ಟ್ ನೇಮಕ ಮಾಡಿತ್ತು.