ನವದೆಹಲಿ: ಉಕ್ರೇನ್‌ನಲ್ಲಿನ ಬಿಕ್ಕಟ್ಟು ಸೇರಿದಂತೆ ವಿವಿಧ ಭೌಗೋಳಿಕ ರಾಜಕೀಯ ಬೆಳವಣಿಗೆಗಳ ಮಧ್ಯೆ ಅನುಭವಿ ರಾಜತಾಂತ್ರಿಕ ವಿನಯ್ ಮೋಹನ್ ಕ್ವಾತ್ರಾ ಅವರು ಭಾನುವಾರ ಭಾರತದ ಹೊಸ ವಿದೇಶಾಂಗ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
1988ರ ಬ್ಯಾಚ್‌ನ ಭಾರತೀಯ ವಿದೇಶಾಂಗ ಸೇವೆ (ಐಎಫ್‌ಎಸ್) ಅಧಿಕಾರಿ, ಕ್ವಾತ್ರಾ ಅವರು ಶನಿವಾರ ಸೇವೆಯಿಂದ ನಿವೃತ್ತರಾದ ಹರ್ಷ್ ವರ್ಧನ್ ಶ್ರಿಂಗ್ಲಾ ಅವರ ಉತ್ತರಾಧಿಕಾರಿಯಾಗಿದ್ದಾರೆ. ಕ್ವಾತ್ರಾ ಅವರು ವಿದೇಶಾಂಗ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಳ್ಳುವ ಮೊದಲು ನೇಪಾಳಕ್ಕೆ ಭಾರತದ ರಾಯಭಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು.
ಕ್ವಾತ್ರಾ ಭಾರತದ ನೆರೆಹೊರೆಯೊಂದಿಗೆ ಯುಎಸ್, ಚೀನಾ ಮತ್ತು ಯುರೋಪ್ ಬಗ್ಗೆ ಪರಿಣತಿಯನ್ನು ಹೊಂದಿದ್ದಾರೆಂದು ತಿಳಿದುಬಂದಿದೆ. ಉಕ್ರೇನ್ ಸಂಘರ್ಷ, ಶ್ರೀಲಂಕಾದಲ್ಲಿನ ತೀವ್ರ ಆರ್ಥಿಕ ಬಿಕ್ಕಟ್ಟು ಮತ್ತು ಅಫ್ಘಾನಿಸ್ತಾನದ ಪರಿಸ್ಥಿತಿ ಮತ್ತು ಇಂಡೋ-ಪೆಸಿಫಿಕ್‌ನಲ್ಲಿನ ಬೆಳವಣಿಗೆಗಳು ಸೇರಿದಂತೆ ವಿವಿಧ ಭೌಗೋಳಿಕ ರಾಜಕೀಯ ಬೆಳವಣಿಗೆಗಳನ್ನು ಭಾರತ ಎದುರಿಸುತ್ತಿರುವ ಸಮಯದಲ್ಲಿ ಅವರು ವಿದೇಶಾಂಗ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
3 ದೇಶಗಳ ಭೇಟಿಯಲ್ಲಿ ಪಿಎಂ: ಜರ್ಮನಿ, ಡೆನ್ಮಾರ್ಕ್ ಮತ್ತು ಫ್ರಾನ್ಸ್‌ಗೆ ಪ್ರಧಾನಿ ನರೇಂದ್ರ ಮೋದಿ ಅವರ ಮೂರು ದಿನಗಳ ಭೇಟಿಗೆ ತೆರಳುತ್ತಿದ್ದು, ಇಂಧನ ಭದ್ರತೆ ಚರ್ಚೆಯ ಪ್ರಮುಖ ವಿಷಯವಾಗಿದೆ ಎಂದು ವಿದೇಶಾಂಗ ಕಾರ್ಯದರ್ಶಿ ವಿನಯ್ ಮೋಹನ್ ಕ್ವಾತ್ರಾ ಭಾನುವಾರ ಹೇಳಿದ್ದಾರೆ.
ಮೋದಿಯವರು ನಾಳೆಯಿಂದ ಮೂರು ದಿನಗಳ ಕಾಲ ವಿದೇಶ ಪ್ರವಾಸದಲ್ಲಿರುತ್ತಾರೆ. ಉಕ್ರೇನ್ ನಲ್ಲಿ ಯುದ್ಧವನ್ನು ನಿಲ್ಲಿಸಬೇಕು. ಬಿಕ್ಕಟ್ಟನ್ನು ಮಾತುಕತೆಯ ಮೂಲಕ ಪರಿಹರಿಸಬೇಕು ಎಂದು ಭಾರತ ಯಾವಾಗಲೂ ಬಯಸುತ್ತದೆ ಎಂದು ವಿದೇಶಾಂಗ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಹೇಳಿದ್ದಾರೆ.