HEALTH TIPS

ಇಲ್ಲ ಹೊಸ ಪಕ್ಷ, ಬಿಹಾರ ಸುಧಾರಣೆಗೆ 3,000 ಕಿ.ಮೀ. ಪಾದಯಾತ್ರೆ: ಪ್ರಶಾಂತ್ ಕಿಶೋರ್

          ನವದೆಹಲಿ: ಸದ್ಯಕ್ಕೆ ಹೊಸ ಪಕ್ಷ ಸ್ಥಾಪನೆ ಇಲ್ಲ ಎಂದು ಸ್ಪಷ್ಟಪಡಿಸಿರುವ ಚುನಾವಣಾ ಕಾರ್ಯತಂತ್ರ ನಿಪುಣ ಪ್ರಶಾಂತ್‌ ಕಿಶೋರ್‌, ಬಿಹಾರದ ಸುಧಾರಣೆಗಾಗಿ ಪಾದಯಾತ್ರೆ ನಡೆಸುವುದಾಗಿ ಘೋಷಿಸಿದ್ದಾರೆ.

          'ಪಶ್ಚಿಮ ಚಂಪಾರಣ್‌ ಗಾಂಧಿ ಆಶ್ರಮದಿಂದ ಅಕ್ಟೋಬರ್‌ 2ರಂದು 3,000 ಕಿ.ಮೀ.

ಪಾದಯಾತ್ರೆ ಆರಂಭಿಸುತ್ತೇನೆ. ಬಿಹಾರದ ಬಹುತೇಕ ಭಾಗದಲ್ಲಿ ಯಾತ್ರೆ ನಡೆಸುವ ಗುರಿ ಇದೆ. ಜನರನ್ನು ಕಚೇರಿಗಳಲ್ಲಿ ಹಾಗೂ ಅವರ ಮನೆಗಳಲ್ಲಿ ನಾವು ಭೇಟಿ ಮಾಡಿ, ಅವರ ಸಮಸ್ಯೆಗಳು ಹಾಗೂ ನಿರೀಕ್ಷೆಗಳನ್ನು ತಿಳಿಯುತ್ತೇವೆ' ಎಂದು ಪ್ರಶಾಂತ್ ಕಿಶೋರ್‌ ಗುರುವಾರ ಸುದ್ದಿ ಗೋಷ್ಠಿಯಲ್ಲಿ ಹೇಳಿದರು.


           ಸದ್ಯಕ್ಕೆ ರಾಜಕೀಯ ಪಕ್ಷವನ್ನು ಆರಂಭಿಸುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಅವರು, 'ಬಿಹಾರದ ಸಮಸ್ಯೆಗಳ ಬಗ್ಗೆ ಅರಿವಿರುವ ಸುಮಾರು 17,000ದಿಂದ 18,000 ಜನರೊಂದಿಗೆ ನಾನು ಮಾತನಾಡಲಿದ್ದೇನೆ ಹಾಗೂ ಅವರನ್ನು ಒಂದೇ ವೇದಿಕೆಯಡಿ ತರಲು ಪ್ರಯತ್ನಿಸುತ್ತೇನೆ. ಆ ಪ್ರಕ್ರಿಯೆಯನ್ನು ನಾನು ಆಗಸ್ಟ್‌ನಿಂದ ಸೆಪ್ಟೆಂಬರ್‌ ವೇಳೆಗೆ ಪೂರ್ಣಗೊಳಿಸಬೇಕಿದೆ' ಎಂದರು.

'ನಿಗದಿತ ಗುರಿಯನ್ನು ತಲುಪಲು ರಾಜಕೀಯ ವೇದಿಕೆಯನ್ನು ಆರಂಭಿಸುವುದು ಅನಿವಾರ್ಯವೆಂದು ಅವರು ಭಾವಿಸಿದರೆ, ಆ ಬಗ್ಗೆ ನಾವು ನಿರ್ಧರಿಸುತ್ತೇವೆ. ಅದು ಪ್ರಶಾಂತ್‌ ಕಿಶೋರ್‌ನ ಪಕ್ಷ ಆಗಿರುವುದಿಲ್ಲ, ಅದು ಜನರ ಪಕ್ಷವಾಗಿರುತ್ತದೆ' ಎಂದು ಪ್ರಶಾಂತ್‌ ಕಿಶೋರ್‌ ಹೇಳಿದರು.

         'ನಿತೀಶ್‌ ಕುಮಾರ್‌ ಮತ್ತು ಲಾಲೂ ಪ್ರಸಾದ್‌ ಅವರ 30 ವರ್ಷಗಳ ಆಡಳಿತದ ಬಳಿಕ ಬಿಹಾರವು ಭಾರತದಲ್ಲಿ ಅತ್ಯಂತ ಹಿಂದುಳಿದ ರಾಜ್ಯವಾಗಿದೆ. ಬಿಹಾರವು ಅಭಿವೃದ್ಧಿ ಆಗಬೇಕಾದರೆ, ಕಳೆದ 10-15 ವರ್ಷಗಳಿಂದ ಸಾಗುತ್ತಿರುವ ಹಾದಿಯಲ್ಲಿ ಸಾಧ್ಯವಾಗುವುದಿಲ್ಲ. ಅದಕ್ಕೆ ಹೊಸ ಪಥದ ಅವಶ್ಯಕತೆ ಇದೆ' ಎನ್ನುವ ಮೂಲಕ ಲಾಲೂ, ನಿತೀಶ್‌ ಆಡಳಿತವನ್ನು ಟೀಕಿಸಿದರು.

          'ಬಿಹಾರದ ಶಿಕ್ಷಣ ವ್ಯವಸ್ಥೆ ಮತ್ತು ಆರೋಗ್ಯ ಮೂಲಸೌಕರ್ಯಗಳು ಕುಂಟುತ್ತ ಸಾಗಿವೆ. ಬಿಹಾರದ ಯುವಕರು ಉದ್ಯೋಗಕ್ಕಾಗಿ ರಾಜ್ಯದಿಂದ ಹೊರಗೆ ಹೋಗುತ್ತಿದ್ದಾರೆ. ಇದು ಬದಲಾಗಬೇಕಿದೆ. ಒಬ್ಬ ವ್ಯಕ್ತಿಯಿಂದ ಇದು ಸಾಧ್ಯವಾಗುವುದಿಲ್ಲ. ನಿಜಕ್ಕೂ ಬಿಹಾರದಲ್ಲಿ ಬದಲಾವಣೆ ಬಯಸುವವರು ಒಟ್ಟಾಗಿ ಮುಂದೆ ಬರಬೇಕು' ಎಂದು ಪ್ರಶಾಂತ್‌ ಬಿಹಾರಿಗಳನ್ನು ಆಹ್ವಾನಿಸಿದರು.

ಕಾಂಗ್ರೆಸ್ ಪಕ್ಷದ ಆಹ್ವಾನದಿಂದ ದೂರ ಸರಿದ ಪ್ರಶಾಂತ್ ನೇರವಾಗಿ ಜನರ ಕಡೆಗೆ ತೆರಳಲು ನಿರ್ಧರಿಸಿರುವುದಾಗಿ ಮೇ 2ರಂದು ಟ್ವೀಟಿಸಿದ್ದರು.

            'ಪ್ರಜಾಪ್ರಭುತ್ವದಲ್ಲಿ ಅರ್ಥಪೂರ್ಣ ರೀತಿಯಲ್ಲಿ ಭಾಗಿಯಾಗುವುದಕ್ಕಾಗಿ ನಡೆಸಿದ ಹುಡುಕಾಟ ಮತ್ತು ಜನರ ಪರವಾದ ನೀತಿ ರೂಪಿಸುವಲ್ಲಿ ನೀಡಿದ ಸಹಕಾರವು ಹತ್ತು ವರ್ಷಗಳ ರೋಲರ್‌ಕೋಸ್ಟರ್‌ ರೈಡ್‌ನಂತಿತ್ತು! ನಾನು ಪಯಣದ ಪುಟ ತಿರುವುತ್ತಿದ್ದಂತೆ, ನಿಜವಾದ ಒಡೆಯರಾದ ಜನರ ಬಳಿಗೆ ಹೋಗಲು, ವಿಚಾರಗಳನ್ನು ಸರಿಯಾಗಿ ತಿಳಿಯಲು ಹಾಗೂ 'ಜನ ಸುರಾಜ್'-ಉತ್ತಮ ಜನಾಡಳಿತದ ಮಾರ್ಗದಲ್ಲಿ ಸಾಗಲು ಇದು ಸಕಾಲವಾಗಿರುವುದು ತೋರುತ್ತಿದೆ. ಅದರ ಶುರು ಬಿಹಾರದಿಂದ' ಎಂದು ಹಂಚಿಕೊಂಡಿದ್ದರು.

            'ಉನ್ನತಾಧಿಕಾರ ಕಾರ್ಯಪಡೆಯ ಭಾಗವಾಗಿ ಪಕ್ಷವನ್ನು ಸೇರುವಂತೆ ಹಾಗೂ ಚುನಾವಣೆಯ ಜವಾಬ್ದಾರಿ ವಹಿಸಿಕೊಳ್ಳುವಂತೆ ಕಾಂಗ್ರೆಸ್ ನೀಡಿದ್ದ ಆಹ್ವಾನವನ್ನು ತಿರಸ್ಕರಿಸಿರುವುದಾಗಿ' ಪ್ರಶಾಂತ್‌ ಇತ್ತೀಚೆಗೆ ಟ್ವೀಟಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries