ನವದೆಹಲಿ: ಎರಡು ತಿಂಗಳ ನಂತರ ದೇಶದಲ್ಲಿ ಕೋವಿಡ್ ಪಾಸಿಟಿವ್ ದರ ಶೇಕಡಾ 1ರಷ್ಟು ಹೆಚ್ಚಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ಪ್ರಕಾರ ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 3 ಸಾವಿರದ 157 ಸೋಂಕಿತರು ಪತ್ತೆಯಾಗಿದ್ದು 26 ಮಂದಿ ಮೃತಪಟ್ಟಿದ್ದಾರೆ.
ಈ ಮೂಲಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 4 ಕೋಟಿಯ 30 ಸಾವಿರದ 82 ಸಾವಿರದ 345ಕ್ಕೆ ಏರಿಕೆಯಾಗಿದ್ದು 5 ಲಕ್ಷದ 23 ಸಾವಿರದ 869 ಮಂದಿ ಮೃತಪಟ್ಟಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ ಕಳೆದ 24 ಗಂಟೆಗಳಲ್ಲಿ 408ರಷ್ಟು ಏರಿಕೆಯಾಗಿ ಇಂದು ಬೆಳಗ್ಗೆ 8 ಗಂಟೆಯ ಹೊತ್ತಿಗೆ ಸಕ್ರಿಯ ಸೋಂಕಿತರು 19 ಸಾವಿರದ 500ಕ್ಕೆ ಏರಿಕೆಯಾಗಿದೆ.
ಎರಡು ತಿಂಗಳ ನಂತರ ದೇಶದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಶೇಕಡಾ 1.07ರಷ್ಟು ಹೆಚ್ಚಳವಾಗಿದೆ. ಕಳೆದ ಫೆಬ್ರವರಿ 27ರಂದು ಶೇಕಡಾ 1.11ರಷ್ಟಾಗಿತ್ತು. ವಾರದ ಕೋವಿಡ್ ಪಾಸಿಟಿವ್ ದರ ಶೇಕಡಾ 0.70ರಷ್ಟು ಹೆಚ್ಚಳವಾಗಿತ್ತು ಎಂದು ಆರೋಗ್ಯ ಸಚಿವಾಲಯ ಹೇಳಿದೆ.
26 ಹೊಸ ಸಾವುಗಳು ವರದಿಯಾಗುವುದರೊಂದಿಗೆ ಸಾವಿನ ಸಂಖ್ಯೆ 5,23,869 ಕ್ಕೆ ಏರಿದೆ. ಸಕ್ರಿಯ ಪ್ರಕರಣಗಳು ಒಟ್ಟು ಸೋಂಕುಗಳಲ್ಲಿ ಶೇಕಡಾ 0.05 ರಷ್ಟಿದ್ದರೆ, ದೇಶದ COVID-19 ಚೇತರಿಕೆ ದರವು 98.74 ಶೇಕಡಾ ಎಂದು ದಾಖಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ರೋಗದಿಂದ ಚೇತರಿಸಿಕೊಂಡವರ ಸಂಖ್ಯೆ 4,25,38,976 ಕ್ಕೆ ಏರಿದೆ, ಆದರೆ ಸಾವಿನ ಪ್ರಮಾಣವು ಶೇಕಡಾ 1.22 ರಷ್ಟಿದೆ. ರಾಷ್ಟ್ರವ್ಯಾಪಿ ಕೋವಿಡ್-19 ವ್ಯಾಕ್ಸಿನೇಷನ್ ಅಭಿಯಾನ ಅಡಿಯಲ್ಲಿ ಇದುವರೆಗೆ ದೇಶದಲ್ಲಿ ವಿತರಿಸಲಾದ ಕೋವಿಡ್ ಲಸಿಕೆ ಡೋಸ್ 189.23 ಕೋಟಿ ಮೀರಿದೆ.
ಭಾರತದ COVID-19 ಸಂಖ್ಯೆಯು ಆಗಸ್ಟ್ 7, 2020 ರಂದು 20 ಲಕ್ಷದ ಗಡಿಯನ್ನು ದಾಟಿತ್ತು. ಡಿಸೆಂಬರ್ 19 ರಂದು ಒಂದು ಕೋಟಿಯ ಗಡಿಯನ್ನು ಮೀರಿದೆ. ಭಾರತದಲ್ಲಿ ಕಳೆದ ವರ್ಷ ಮೇ 4 ರಂದು ಎರಡು ಕೋಟಿ ಮತ್ತು ಜೂನ್ 23ರಂದು ಮೂರು ಕೋಟಿ ಕೋವಿಡ್ ಸೋಂಕಿತರ ಸಂಖ್ಯೆ ದಾಟಿದೆ.