ನವದೆಹಲಿ: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ನೇತೃತ್ವದ ಸುಪ್ರೀಂ ಕೋರ್ಟ್ ಕೊಲಿಜಿಯಂ ಇಬ್ಬರು ನ್ಯಾಯಮೂರ್ತಿಗಳನ್ನು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರನ್ನಾಗಿ ನೇಮಿಸಲು ಶಿಫಾರಸು ಮಾಡಿದ್ದು, ಈ ಇಬ್ಬರು ನ್ಯಾಯಮೂರ್ತಿಗಳ ನೇಮಕದಿಂದ ಸುಪ್ರೀಂಕೋರ್ಟ್ 34 ನ್ಯಾಯಾಧೀಶರ ಪೂರ್ಣ ಬಲವನ್ನು ಮರಳಿ ಪಡೆಯಲು ಸಜ್ಜಾಗಿದೆ.
ಸಿಜೆಐ ಎನ್ ವಿ ರಮಣ ನೇತೃತ್ವದ ಸುಪ್ರೀಂ ಕೋರ್ಟ್ ಕೊಲಿಜಿಯಂ ಗೌಹಾಟಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸುಧಾಂಶು ಧುಲಿಯಾ ಮತ್ತು ಗುಜರಾತ್ ಹೈಕೋರ್ಟ್‌ನ ನ್ಯಾಯಮೂರ್ತಿ ಜಮ್ಶೆಡ್ ಬಿ ಪರ್ದಿವಾಲಾ ಅವರನ್ನು ಸುಪ್ರೀಂ ಕೋರ್ಟ್‌ಗೆ ಉನ್ನತೀಕರಿಸಲು ಶಿಫಾರಸು ಮಾಡಿತ್ತು.
ಕೇಂದ್ರ ಕಾನೂನು ಸಚಿವಾಲಯ ಶನಿವಾರ ಈ ಇಬ್ಬರು ನ್ಯಾಯಾಧೀಶರ ನೇಮಕಾತಿಯನ್ನು ಪ್ರತ್ಯೇಕವಾಗಿ ಅಧಿಸೂಚನೆಯಲ್ಲಿ ಪ್ರಕಟಿಸಿದೆ.
ಇಬ್ಬರೂ ನ್ಯಾಯಮೂರ್ತಿಗಳು ಮುಂದಿನ ವಾರದ ಆರಂಭದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ನಂತರ, ಸುಪ್ರೀಂ ಕೋರ್ಟ್ ತನ್ನ ಮಂಜೂರಾದ 34 ನ್ಯಾಯಾಧೀಶರ ಬಲವನ್ನು ಮರಳಿ ಪಡೆಯುತ್ತದೆ.