ನವದೆಹಲಿ: 40 ಕೋಟಿ ರೂಪಾಯಿ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ ಆಮ್ ಆದ್ಮಿ ಪಕ್ಷದ ಶಾಸಕ ಜಸ್ವಂತ್ ಸಿಂಗ್ ಗಜ್ಜನ್ ಮಜ್ರಾ ಅವರ ನಿವಾಸದಲ್ಲಿ ಕೇಂದ್ರ ತನಿಖಾ ದಳ ಇಂದು ಶೋಧ ನಡೆಸಿದೆ. ಪಂಜಾಬ್‌ನ ಸಂಗ್ರೂರ್‌ನಲ್ಲಿ ಅವರ ನಿವಾಸ ಸೇರಿದಂತೆ ಸಂಗ್ರೂರ್‌ನಲ್ಲಿರುವ ಮೂರು ಸ್ಥಳಗಳನ್ನು ಶೋಧಿಸಲಾಗಿದೆ.
ಬ್ಯಾಂಕ್ ಆಫ್ ಇಂಡಿಯಾದಲ್ಲಿ 40.92 ಕೋಟಿ ರೂ. ಸಾಲ ವಂಚನೆ ಆರೋಪದ ಮೇಲೆ ಎಫ್‌ಐಆರ್ ದಾಖಲಿಸಿದ ನಂತರ ಶೋಧ ನಡೆಸಲಾಗಿದೆ. ದಾಳಿ ವೇಳೆ ಸಿಬಿಐ ವಿವಿಧ ವ್ಯಕ್ತಿಗಳ ಸಹಿಗಳನ್ನು ಹೊಂದಿರುವ 94 ಖಾಲಿ ಚೆಕ್‌ಗಳನ್ನು ಲಗತ್ತಿಸಿದ ಆಧಾರ್ ಕಾರ್ಡ್‌ಗಳನ್ನು ವಶಪಡಿಸಿಕೊಂಡಿದೆ ಎಂದು ತಿಳಿದುಬಂದಿದೆ.
ಸಿಬಿಐ ವಕ್ತಾರ ಆರ್‌ಸಿ ಜೋಶಿ ಮಾತನಾಡಿ ಅಂದಾಜು 16.57 ಲಕ್ಷ ರೂಪಾಯಿ ನಗದು, ಸುಮಾರು 88 ವಿದೇಶಿ ಕರೆನ್ಸಿ ನೋಟುಗಳು, ಕೆಲವು ಆಸ್ತಿ ದಾಖಲೆಗಳು, ಹಲವಾರು ಬ್ಯಾಂಕ್ ಖಾತೆಗಳು ಮತ್ತು ಇತರ ದೋಷಾರೋಪಣೆ ದಾಖಲೆಗಳು ಶೋಧದ ಸಮಯದಲ್ಲಿ ಪತ್ತೆಯಾಗಿವೆ ಎಂದಿದ್ದಾರೆ.
ಮಲೇರ್‌ಕೋಟ್ಲಾದ ಗೌನ್ಸ್‌ಪುರ ಮೂಲದ ಸಿಂಗ್, ತಾರಾ ಕಾರ್ಪೊರೇಷನ್ ಲಿಮಿಟೆಡ್ (ಮಲೌಧ್ ಆಗ್ರೋ ಲಿಮಿಟೆಡ್ ಎಂದು ಮರುನಾಮಕರಣ ಮಾಡಲಾಗಿದೆ) ವಿರುದ್ಧ ಬ್ಯಾಂಕ್ ಆಫ್ ಇಂಡಿಯಾ ಲುಧಿಯಾನ ಶಾಖಾ ಅಧಿಕಾರಿಗಳು ನೀಡಿದ ದೂರಿನ ಮೇರೆಗೆ ಸಿಬಿಐ ಪ್ರಕರಣ ದಾಖಲಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಮರ್‌ಗಢ ಎಂಎಲ್‌ಎ ಜಸ್ವಂತ್ ಸಿಂಗ್ ಗಜ್ಜನ್ ಮಜ್ರಾ ಆಗ ಸಂಸ್ಥೆಯಲ್ಲಿ ನಿರ್ದೇಶಕರಾಗಿದ್ದರಿಂದ ಪರಿಶೀಲನೆ ನಡೆಸಲಾಗಿದೆ. ಕೇಂದ್ರೀಯ ತನಿಖಾ ದಳವು ಇಂದು ಮಲೇರ್‌ಕೋಟ್ಲಾ (ಪಂಜಾಬ್) ಸೇರಿದಂತೆ ಮೂರು ಸ್ಥಳಗಳಲ್ಲಿ ಖಾಸಗಿ ಸಂಸ್ಥೆಗಳು, ನಿರ್ದೇಶಕರು/ಖಾತರಿದಾರರು ಸೇರಿದಂತೆ ಆರೋಪಿಗಳ ಮನೆಗಳಲ್ಲಿ ಶೋಧ ನಡೆಸುತ್ತಿದೆ.
ಶಾಸಕ ಜಸ್ವಂತ್ ಸಿಂಗ್ ಗಜ್ಜನ್ ಮಜ್ರಾ ಅವರ ಸಹೋದರರಾದ ಬಲ್ವಂತ್ ಸಿಂಗ್ ಮತ್ತು ಕುಲ್ವಂತ್ ಸಿಂಗ್ ಮತ್ತು ಸೋದರಳಿಯ ತೇಜಿಂದರ್ ಸಿಂಗ್, ಎಲ್ಲಾ ನಿರ್ದೇಶಕರು ಮತ್ತು ಖಾತರಿದಾರರ ಮೇಲೂ ಪ್ರಕರಣ ದಾಖಲಿಸಲಾಗಿದೆ. ಮತ್ತೊಂದು ಕಂಪನಿಯಾದ ತಾರಾ ಹೆಲ್ತ್ ಫುಡ್ಸ್ ಲಿಮಿಟೆಡ್ ಅನ್ನು ಸಹ ಎಫ್‌ಐಆರ್‌ನಲ್ಲಿ ಆರೋಪಿ ಎಂದು ಹೆಸರಿಸಲಾಗಿದೆ ಎಂದು ಅವರು ಹೇಳಿದರು.
ಆರೋಪಿಗಳು ಬ್ಯಾಂಕ್ ನಿಂದ ಯಾವ ಉದ್ದೇಶಕ್ಕಾಗಿ ಸಾಲವನ್ನು ಪಡೆದಿದ್ರೂ ಆ ಉದ್ದೇಶಕ್ಕಾಗಿ ಹಣವನ್ನ ಬಳಸಿಲ್ಲ ಎಂಬ ಆರೋಪವೂ ಕೇಳಿಬಂದಿದೆ ಎಂದು ಸಿಬಿಐ ವಕ್ತಾರರು ತಿಳಿಸಿದ್ದಾರೆ. ದೆಹಲಿಯಲ್ಲಿ ಬಿಜೆಪಿಯ ತಾಜಿಂದರ್ ಬಗ್ಗಾ ಅವರನ್ನು ಪಂಜಾಬ್ ಪೊಲೀಸರು ಬಂಧಿಸಿದ ಬೆನ್ನಲ್ಲೇ ಎಎಪಿ ಶಾಸಕನ ಮನೆ ಮೇಲೆ ದಾಳಿಯಾಗಿರೋದು ಕುತೂಹಲ.