ಬ್ಯಾಂಕಾಕ್: ಥಾಮಸ್ ಕಪ್ ಟೂರ್ನಿಯಲ್ಲಿ ಭಾರತೀಯ ಪುರುಷರ ಬ್ಯಾಡ್ಮಿಂಟನ್ ತಂಡ ಐತಿಹಾಸಿಕ ಸಾಧನೆ ಮಾಡಿದ್ದು, ಗುರುವಾರ ಮಲೇಷ್ಯಾವನ್ನು 3-2 ಗೋಲುಗಳಿಂದ ಸೋಲಿಸುವ ಮೂಲಕ 43 ವರ್ಷಗಳ ಬಳಿಕ ಸೆಮಿಫೈನಲ್ ಪ್ರವೇಶಿಸಿದೆ.
ಥಾಮಸ್ ಕಪ್ ನಲ್ಲಿ ಭಾರತ ಈ ಹಿಂದೆ ಅಂದರೆ 1952, 1955 ಮತ್ತು 1979 ರಲ್ಲಿ ಮೂರು ಬಾರಿ ಸೆಮಿಫೈನಲ್ ತಲುಪಿತ್ತು. 2020ರ ಹಿಂದಿನ ಆವೃತ್ತಿಯ ಕ್ವಾರ್ಟರ್‌ಫೈನಲ್‌ನಲ್ಲಿ ಭಾರತ ಸೋತಿತ್ತು. ದಕ್ಷಿಣ ಕೊರಿಯಾ ಮತ್ತು ಡೆನ್ಮಾರ್ಕ್ ನಡುವಿನ ಪಂದ್ಯದ ವಿಜೇತರನ್ನು ಭಾರತ ಸೆಮಿಫೈನಲ್‌ನಲ್ಲಿ ಎದುರಿಸಲಿದೆ.
ಕಿಡಂಬಿ ಶ್ರೀಕಾಂತ್, ಹೆಚ್ ಎಸ್ ಪ್ರಣೋಯ್ ಮತ್ತು ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಜೋಡಿಯು ತಮ್ಮ ತಮ್ಮ ಪಂದ್ಯಗಳನ್ನು ಗೆದ್ದು ಭಾರತವನ್ನು ಸೆಮಿಫೈನಲ್‌ಗೆ ಕೊಂಡೊಯ್ದರು.
ಮಲೇಷ್ಯಾ ವಿರುದ್ಧದ ಕ್ವಾರ್ಟರ್‌ಫೈನಲ್‌ನಲ್ಲಿ ಭಾರತದ ಆರಂಭ ಉತ್ತಮವಾಗಿರಲಿಲ್ಲ. ತಂಡದ ಪ್ರಮುಖ ಆಟಗಾರ ಲಕ್ಷ್ಯ ಸೇನ್ ಮೊದಲ ಸಿಂಗಲ್ಸ್‌ನಲ್ಲಿ ಲೀ ಝಿ ಜಿಯಾ ವಿರುದ್ಧ ಸೋಲು ಅನುಭವಿಸಿದ್ದರು. 23-21, 21-9 ಅಂತರದಿಂದ ಮಲೇಷ್ಯಾದ ಆಟಗಾರ ಭಾರತೀಯನನ್ನು ಹಿಮ್ಮೆಟ್ಟಿಸಿದ್ದರು. ಇದು ಮಲೇಷಿಯಾದ ವಿರುದ್ಧ ಲಕ್ಷ್ಯ ಸೇನ್ ಅವರ ಮೊದಲ ಸೋಲಾಗಿದೆ.