ನವದೆಹಲಿ: ಬೇಸಿಗೆ ಧಗೆಗೆ ಉತ್ತರ ಭಾರತ ತತ್ತರಿಸಿ ಹೋಗಿದ್ದು, ಉಷ್ಣ ಹವೆ ಮುಂದುವರೆದಿದ್ದು, ಗುರಗಾಂವ್ ನಲ್ಲಿ 48 ಡಿಗ್ರಿ ತಾಪಮಾನ ದಾಖಲಾಗಿದೆ.
ಈ ಹಿಂದೆ ರಾಷ್ಟ್ರರಾಜಧಾನಿ ದೆಹಲಿ ಗರಿಷ್ಠ ತಾಪಮಾನಕ್ಕೆ ಸಾಕ್ಷಿಯಾಗಿತ್ತು. ಇದೀಗ ದೆಹಲಿಯ ನೆರೆಯ ಗುರ್‌ಗಾಂವ್ ಭಾನುವಾರದಂದು ಬಿಸಿ ಕಡಾಯಿಯಾಗಿ ಮಾರ್ಪಟ್ಟಿತ್ತು. ದೇಶದ ಉತ್ತರ ಪ್ರದೇಶದಲ್ಲಿ ಅಧಿಕ ಶಾಖದ ನಡುವೆಯೇ ತಾಪಮಾನ ಅಸಹನೀಯ 48.1 ಡಿಗ್ರಿ ಸೆಲ್ಸಿಯಸ್ ಗೆ ಏರಿಕೆಯಾಗಿದೆ. ಹವಾಮಾನ ಇಲಾಖೆ ನೀಡಿರುವ ಮಾಹಿತಿಯಂತೆ ಮುಂದಿನ ದಿನಗಳಲ್ಲಿ ತಾಪಮಾನ ಇದೇ ರೀತಿ ಮುಂದುವರೆಯಲಿದೆ ಎನ್ನಲಾಗಿದೆ. ರಾಜಸ್ಥಾನದಲ್ಲೂ ಒಣಹವೆ ಮುಂದುವರೆದಿದ್ದು, ಇಲ್ಲಿ ರೆಡ್ ಅಲರ್ಟ್ ಮುಂದುವರೆಸಲಾಗಿದೆ. ವಾಯುವ್ಯ ಭಾರತಕ್ಕೆ ತೀವ್ರವಾದ ಶಾಖದ ಅಲೆಯ ಎಚ್ಚರಿಕೆ ನೀಡಲಾಗಿದೆ.
ಈ ಕುರಿತು ಮಾತನಾಡಿರುವ ಹವಾಮಾನ ಇಲಾಖೆಯ ಹಿರಿಯ ವಿಜ್ಞಾನಿಯೊಬ್ಬರು, 'ರಾಜಸ್ಥಾನದಲ್ಲಿ ಬಿಸಿಗಾಳಿಯ ತೀವ್ರತೆ ಮುಂದುವರೆದಿದ್ದು, ಇಂದು ರೆಡ್ ಅಲರ್ಟ್ ಮತ್ತು ನಾಳೆ ಹಳದಿ ಅಲರ್ಟ್ ನೀಡಿದ್ದೇವೆ. ಅದೇ ರೀತಿ, ನಾವು ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ಪೂರ್ವ ಮಧ್ಯಪ್ರದೇಶ ಮತ್ತು ದೆಹಲಿಗೆ ಆರೆಂಜ್ ಅಲರ್ಟ್ ನೀಡಿದ್ದೇವೆ" ಎಂದು ಹೇಳಿದ್ದಾರೆ.
ದೆಹಲಿಯಲ್ಲಿ 49.2 ಡಿಗ್ರಿ ತಾಪಮಾನ
ಭಾರತೀಯ ಹವಾಮಾನ ಇಲಾಖೆಯ ನರೇಶ್ ಕುಮಾರ್ ಅವರು ನೀಡಿರುವ ಮಾಹಿತಿ ಅನ್ವಯ ರಾಷ್ಟ್ರ ರಾಜಧಾನಿ ದೆಹಲಿಯ ಹಲವು ಭಾಗಗಳಲ್ಲಿ ಗರಿಷ್ಠ ತಾಪಮಾನ ದಾಖಲಾಗಿದ್ದು, ದೆಹಲಿಯ ಮುಂಗೇಶ್‌ಪುರದಲ್ಲಿ 49.2 ಡಿಗ್ರಿ ಮತ್ತು ನಜಾಫ್‌ಗಢದಲ್ಲಿ 49.1 ಡಿಗ್ರಿ ದಾಖಲೆಯ ತಾಪಮಾನ ದಾಖಲಾಗಿದೆ. ದೆಹಲಿ ಮತ್ತು ಹಲವಾರು ಸಣ್ಣ ಹಳ್ಳಿಗಳಲ್ಲಿ ರಾತ್ರಿಯ ತಾಪಮಾನವು 35 ಡಿಗ್ರಿ ಸೆಲ್ಸಿಯಸ್ ಗಿಂತ ಹೆಚ್ಚಿದ್ದು, ಸುಮಾರು ಗರಿಷ್ಠ 39 ಡಿಗ್ರಿ ಸೆಲ್ಸಿಯಸ್ ವರೆಗೂ ರಾತ್ರಿ ತಾಪಮಾನ ದಾಖಲಾಗಿದೆ.
"ಸಾಮಾನ್ಯವಾಗಿ ಹೇಳುವುದಾದರೆ, ಪಂಜಾಬ್, ಹರಿಯಾಣ, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶ ಸೇರಿದಂತೆ ವಾಯುವ್ಯ ಭಾರತದ ಬಹುತೇಕ ಭಾಗಗಳು ನಿನ್ನೆ ತೀವ್ರತರವಾದ ಶಾಖದ ತರಂಗ ಪರಿಸ್ಥಿತಿಗಳನ್ನು ಅನುಭವಿಸಿವೆ. ವಿದರ್ಭ ಸಹ ಶಾಖದ ಅಲೆಯ ಪರಿಸ್ಥಿತಿಯನ್ನು ಅನುಭವಿಸಿದೆ ಎಂದು ಕೇಂದ್ರ ಹವಾಮಾನ ಇಲಾಖೆಯ ಶ್ರೀ ಕುಮಾರ್ ಹೇಳಿದ್ದಾರೆ.
ಶಾಖದ ಅಲೆಯು ದುರ್ಬಲ ಜನರಿಗೆ ಅಂದರೆ ಶಿಶುಗಳು, ವೃದ್ಧರು, ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವ ಜನರಿಗೆ - ಪೀಡಿತ ಪ್ರದೇಶಗಳಲ್ಲಿ "ಮಧ್ಯಮ" ಆರೋಗ್ಯ ಕಾಳಜಿಗೆ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ಆದ್ದರಿಂದ ಈ ಪ್ರದೇಶಗಳ ಜನರು ಶಾಖಕ್ಕೆ ಒಡ್ಡಿಕೊಳ್ಳುವುದನ್ನು ತಪ್ಪಿಸಬೇಕು, ಹಗುರವಾದ, ತಿಳಿ ಬಣ್ಣದ, ಸಡಿಲವಾದ, ಹತ್ತಿ ಬಟ್ಟೆಗಳನ್ನು ಧರಿಸಬೇಕು ಮತ್ತು ಬಟ್ಟೆ, ಟೋಪಿ ಅಥವಾ ಛತ್ರಿ ಇತ್ಯಾದಿಗಳನ್ನು ಬಳಸಿ ತಲೆಯನ್ನು ಬಿಸಿಲಿನಿಂದ ಮುಚ್ಚಬೇಕು ಎಂದು ಹವಾಮಾನ ಕಚೇರಿ ತಿಳಿಸಿದೆ.