ದರ್ಶನಕ್ಕಾಗಿ ಇರುವ ಎಲ್ಲ ಸರದಿ ಸಾಲುಗಳು ಭರ್ತಿಯಾಗಿದ್ದು, ಕಾಯ್ದು ನಿಲ್ಲುವ 30 ವಿಭಾಗಗಳು ಭರ್ತಿಯಾಗಿವೆ. ಇವುಗಳ ಹೊರತು 2 ಕಿ.ಮೀನಷ್ಟು ಭಕ್ತರ ಸಾಲು ಇದೆ. ಬೆಟ್ಟದ ಪ್ರವೇಶ ಮಾರ್ಗ ಅಲಿಪಿರಿ ಟೋಲ್‌ಗೇಟ್ ಬಳಿಯೂ ವಾಹನಗಳ ಉದ್ದನೆಯ ಸಾಲಿದೆ. ಭಕ್ತರ ದಟ್ಟಣೆಯ ಹಿನ್ನೆಲೆಯಲ್ಲಿ ಕುಡಿಯುವ ನೀರು, ಹಾಲು, ಅನ್ನಪ್ರಸಾದಕ್ಕೆ ಸೌಲಭ್ಯ ಕಲ್ಪಿಸಲು ಹೆಚ್ಚಿನ ಸಿದ್ಧತೆ ಆಗಿದೆ. ಆದರೆ, ಕೆಲ ಭಕ್ತರು ನಮಗೆ ಅನ್ನ ಪ್ರಸಾದ ವಿಳಂಬವಾಗಿ ದೊರೆಯಿತು, ಇತರೆ ಸೌಲಭ್ಯ ಸಿಗಲಿಲ್ಲ ಎಂದು ದೂರಿದ್ದಾರೆ.
ವಿಐಪಿ ದರ್ಶನಕ್ಕೆ ಬ್ರೇಕ್ ಹಾಕಿದ ಟಿಟಿಡಿ
ಭಕ್ತರ ಅನಿರೀಕ್ಷಿತ ದಟ್ಟಣೆ ಹಿನ್ನೆಲೆಯಲ್ಲಿ ಟಿಟಿಡಿ ಅಧಿಕಾರಿಗಳು ಬುಧವಾರದವರೆಗೆ ‘ವಿಐಪಿ ಬ್ರೇಕ್’ ದರ್ಶನ ಸೌಲಭ್ಯ ರದ್ದುಪಡಿಸಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರಿಗೆ ದೇವಾಲಯದ ಒಳಾವರಣ ಪ್ರವೇಶಿಸಲು ಅನುವು ಮಾಡಿಕೊಟ್ಟಿದ್ದಾರೆ. ಈ ಬಗ್ಗೆ ಮಾತನಾಡಿರುವ ಟಿಟಿಡಿ ಅಧಿಕಾರಿಯೊಬ್ಬರು, ‘ಗಂಟೆಗೆ 4,500 ಭಕ್ತರಿಗಷ್ಟೇ ಅವಕಾಶ ಕಲ್ಪಿಸಲು ಸಾಧ್ಯವಿದೆ. ಆದರೆ, ಪ್ರತಿ ಗಂಟೆಗೆ ಸರದಿಗೆ ಸುಮಾರು 8,000 ಭಕ್ತರು ಸೇರ್ಪಡೆ ಆಗುತ್ತಿದ್ದಾರೆ. ಇನ್ನೂ ಕೆಲವು ದಿನ ಹೀಗೇ ಭಕ್ತರದಟ್ಟಣೆ ಇರುವ ಸಂಭವವಿದೆ. ಅಂತೆಯೇ ಶನಿವಾರ ದೇಗುಲದ ಹುಂಡಿಯಲ್ಲಿ 3.76 ಕೋಟಿ ರೂ ಸಂಗ್ರಹವಾಗಿತ್ತು. ಅದಕ್ಕೂ ಹಿಂದೆ ಗುರುವಾರ ಹುಂಡಿಯಲ್ಲಿನ ಸಂಗ್ರಹ ಮೊತ್ತ 5.43 ಕೋಟಿ ಸಂಗ್ರಹ ಆಗಿತ್ತು’ ಎಂದು ವಿವರಿಸಿದ್ದಾರೆ.
ಕೋವಿಡ್ ಸಾಂಕ್ರಾಮಿಕದ ಕಾರಣ ಎರಡು ವರ್ಷ ದೇಗುಲಕ್ಕೆ ಭೇಟಿ ನೀಡುವುದಕ್ಕೆ ನಿರ್ಬಂಧವಿತ್ತು. ಪರಿಣಾಮ, ಈಗ ನಿರ್ಬಂಧ ಸಡಿಲಿಕೆಯ ಹಂತದ ನಂತರ ಈಗ ಬೇಸಿಗೆ ರಜೆ ಅವಧಿ ಹಾಗೂ ವಾರಾಂತ್ಯದಲ್ಲಿ ದೇಗುಲಕ್ಕೆ ಭೇಟಿ ನೀಡುವವರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ.
ಯಾತ್ರೆ ಮುಂದೂಡಿ; ಟಿಟಿಡಿ ಮನವಿ
ಭಕ್ತರು ಕಿಲೋಮೀಟರ್ ಗಟ್ಟಲೆ ಸರತಿ ಸಾಲಿನಲ್ಲಿ ಕಾಯುವುದರಿಂದ ದೇವರ ದರ್ಶನಕ್ಕೆ ಸುಮಾರು 48 ಗಂಟೆಗಳ ಕಾಲಾವಕಾಶ ಬೇಕಾಗಿರುವ ಹಿನ್ನೆಲೆಯಲ್ಲಿ ತಿರುಮಲ ತಿರುಪತಿ ದೇವಸ್ಥಾನ ಮಹತ್ವದ ನಿರ್ಧಾರ ಕೈಗೊಂಡಿದ್ದು, ಭಕ್ತರಿಗೆ ತಿರುಮಲ ಯಾತ್ರೆ ರದ್ದುಗೊಳಿಸುವಂತೆ ಟಿಟಿಡಿ ಮನವಿ ಮಾಡಿದೆ. ವಿಶೇಷವಾಗಿ ವಿಐಪಿಗಳು ತಮ್ಮ ತಿರುಮಲ ಪ್ರವಾಸವನ್ನು ಸದ್ಯಕ್ಕೆ ಮುಂದೂಡುವಂತೆ ಸೂಚಿಸಬೇಕು ಎಂದು ಟಿಟಿಡಿ ಶನಿವಾರ ಒತ್ತಾಯಿಸಿದೆ. ಕಲ್ಯಾಣ ಕಟ್ಟೆಯಲ್ಲಿ ಮುಡಿ (ತಲೆ ಕೂದಲು) ಸಮರ್ಪಿಸಲು ಭಕ್ತರು ಗಂಟೆಗಟ್ಟಲೆ ಕಾಯುತ್ತಿದ್ದು, ತಂಗಲು ಮತ್ತೊಂದೆಡೆ ಬಾಡಿಗೆ ಕೊಠಡಿ ಸಿಗದೆ ಭಕ್ತರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.