ಕಾಸರಗೋಡು: ಮಂಜೇಶ್ವರ ವಿಧಾನಸಭಾ ವಲಯದ ತಲಪ್ಪಾಡಿಯಿಂದ ಮೊಗ್ರಾಲ್ ವರೆಗಿನ ರಾಷ್ಟ್ರೀಯ ಹೆದ್ದಾರಿ ಅಭಿವೃದ್ದಿಗೆ ಸಂಬಂಧಿಸಿ ಹೆದ್ದಾರಿ ಹಾದುಹೋಗುವ ವ್ಯಾಪ್ತಿಯ ಜನರು ಅನುಭವಿಸುವ ಸಂಕಷ್ಟ ಹಾಗೂ ಕಳವಳಗಳ ಹಿನ್ನೆಲೆಯಲ್ಲಿ ಅನೇಕ ದೂರುಗಳು ಬಂದಿದ್ದು ಈ ಬಗ್ಗೆ ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ನೇತೃತ್ವದಲ್ಲಿ ಕಲೆಕ್ಟರೇಟ್ ನಲ್ಲಿ ರಾಷ್ಟ್ರೀಯ ಹೆದ್ದಾರಿ ಅಥೋರಿಟಿ ಯೋಜನಾ ನಿರ್ದೇಶಕರ ಮತ್ತು ಸಹಾಯಕ ಜಿಲ್ಲಾಧಿಕಾರಿಗಳ ಸಭೆ ನಡೆಸಲಾಯಿತು. ಹೆದ್ದಾರಿ ಹಾದುಹೋಗುವ ಮಂಜೇಶ್ವರ, ಮಂಗಲ್ಪಾಡಿ, ಕುಂಬಳೆ ಗ್ರಾ.ಪಂ. ಅಧ್ಯಕ್ಷರುಗಳು, ಹೈವೇ ಅಥೋರಿಟಿ ಗುತ್ತಿಗೆದಾರರಾದ ಊರಾಲುಂಗಲ್ ಲೇಬರ್ ಕೋ ಆಪರೇಟಿವ್ ಸೊಸೈಟಿ ಮೊದಲಾದವರು ಸಭೆಯಲ್ಲಿ ಭಾಗವಹಿಸಿದ್ದರು.
ರಸ್ತೆಯ ಇಕ್ಕೆಲಗಳಲ್ಲಿ ವಾಸಿಸುವ ಸಾವಿರಾರು ಕುಟುಂಬಗಳು, ಸ್ಥಳೀಯರು, ವ್ಯಾಪಾರಸ್ಥರು ರಸ್ತೆ ಅಭಿವೃದ್ಧಿ ಹೆಸರಲ್ಲಿ ಉಂಟಾಗುವ ಅಸಮರ್ಪಕ ವ್ಯವಸ್ಥೆಯ ಬಗ್ಗೆ ಚಿಂತಿಸಿದ್ದು, ಆಸ್ಪತ್ರೆ, ಶಾಲೆ, ಪ್ರಾರ್ಥನಾ ಮಂದಿರಗಳಿಗೆ ತೆರಳಲು ಕಿ.ಮೀ.ಗಟ್ಟಲೆ ಸಂಚರಿಸಬೇಕಾಗಿದೆ ಎಂದು ಶಾಸಕರು ಸಭೆಯಲ್ಲಿ ಗಮನ ಸೆಳೆದರು.
ಪ್ರಮುಖ ಪಟ್ಟಣಗಳಲ್ಲಿ ಮೇಲ್ಸೇತುವೆಗಳನ್ನು ಸ್ಥಾಪಿಸಲು ಮತ್ತು ತೂಮಿನಾಡು, ಕುಂಜತ್ತೂರು, ಉದ್ಯಾವರ, ಮಂಜೇಶ್ವರ, ಪೊಸೋಟ್, ಹೊಸಂಗಡಿ, ಉಪ್ಪಳ ಗೇಟ್, ಉಪ್ಪಳ ಪೇಟೆ, ಕೈಕಂಬ, ನಯಾಬಜಾರ್, ಬಂದ್ಯೋಡು, ಶಿರಿಯಾ, ಆರಿಕ್ಕಾಡಿ, ಕುಂಬಳೆ, ಮೊಗ್ರಾಲ್ ಗಳಲ್ಲಿ ಅಗತ್ಯ ಕ್ರಾಸಿಂಗ್‍ಗಳನ್ನು ಸ್ಥಾಪಿಸಲು ಕ್ರಮಕೈಗೊಳ್ಳಬೇಕು ಎಂದು ಶಾಸಕರು ಕ್ಷೇತ್ರದ ಸಲಹೆಗಳನ್ನು ಮುಂದಿಟ್ಟರು. ಮೇ 5 ರಂದು ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್, ಶಾಸಕ ಎಕೆಎಂ ಅಶ್ರಫ್, ಜಿಲ್ಲಾಧಿಕಾರಿ, ಎನ್‍ಎಚ್‍ಐಎ ಯೋಜನಾಧಿಕಾರಿ, ತ್ರಿಸ್ಥರ ಪಂಚಾಯತಿಗಳ ಪ್ರತಿನಿಧಿಗಳು, ಎನ್‍ಎಚ್‍ಐಎ ಅಧಿಕಾರಿಗಳು, ಉರಾಳುಂಗಲ್ ಸೊಸೈಟಿ ಪ್ರತಿನಿಧಿಗಳು ಮತ್ತು ಇತರ ಸಂಬಂಧಪಟ್ಟ ಅಧಿಕಾರಿಗಳು ಈ ಪ್ರದೇಶಗಳ ಅಗತ್ಯಗಳನ್ನು ನೇರವಾಗಿ ನೋಡಲು ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ. ಕಾಮಗಾರಿ ವೇಳೆ ಶಾಸಕ-ಪಂಚಾಯತಿ ನಿಧಿಯಿಂದ ಅಳವಡಿಸಿರುವ ಹೈಮಾಸ್ಟ್ ಹಾಗೂ ಮಿನಿಮಾಸ್ಟ್ ಲೈಟ್ ಗಳನ್ನು ಬದಲಾಯಿಸಲು ಹಾಗೂ ಜಲ ಪ್ರಾಧಿಕಾರದ ಪೈಪ್ ಲೈನ್ ಒಡೆದಿರುವುದನ್ನು ಕೂಡಲೇ ಸರಿಪಡಿಸಲು ಅಗತ್ಯ ಕ್ರಮಕೈಗೊಳ್ಳಲು ನಿರ್ಧರಿಸಲಾಯಿತು.