ನವದೆಹಲಿ: ಕಳೆದ ವಾರ ದೆಹಲಿಯ ಮುಂಡ್ಕಾದಲ್ಲಿ ಬೆಂಕಿಗೆ ಆಹುತಿಯಾಗಿದ್ದ ಕಟ್ಟಡದಲ್ಲಿ ಸಿಲುಕಿದ್ದ ಹಲವು ಮಂದಿಗೆ ಕ್ರೇನ್ ಆಪರೇಟರ್ ದಯಾನಂದ್ ತಿವಾರಿ ಆಪತ್ಬಾಂಧವನಂತೆ ಕಂಡಿದ್ದರು.
ಈ ಅವಘಡದಲ್ಲಿ 27 ಮಂದಿ ಜೀವ ಕಳೆದುಕೊಂಡಿದ್ದರೆ, ಕ್ರೇನ್ ಆಪರೇಟರ್ ದಯಾನಂದ್ ತಿವಾರಿ 50 ಮಂದಿಯನ್ನು ಬೆಂಕಿಗೆ ಆಹುತಿಯಾಗಿದ್ದ ಕಟ್ಟಡದಿಂದ ರಕ್ಷಿಸಿದ್ದಾರೆ.
ತನ್ನ ಸಹೋದರನೊಂದಿಗೆ ಕಟ್ಟಡದ ಬಳಿ ಹಾದುಹೋಗುತ್ತಿದ್ದಾಗ ದಯಾನಂದ್ ತಿವಾರಿ ಬೆಂಕಿ ಹೊತ್ತಿರುವುದನ್ನು ಗಮನಿಸಿದರು. ಅಗ್ನಿಶಾಮಕ ವಾಹನಗಳು ಬರುವ ಮುನ್ನವೇ ಕಟ್ಟಡದಿಂದ ಮಂದಿಯನ್ನು ರಕ್ಷಿಸಬೇಕೆಂದ ದಯಾನಂದ್ ತಡ ಮಾಡದೇ ಕಾರ್ಯಪ್ರವೃತ್ತರಾದರು.
ಈ ಬಗ್ಗೆ ಮಾತನಾಡಿರುವ ಕ್ರೇನ್ ಆಪರೇಟರ್ ದಯಾನಂದ್, "ನಾನು ಮಾನವನಾಗಿ ನನ್ನ ಕರ್ತವ್ಯವನ್ನಷ್ಟೇ ನಿರ್ವಹಿಸಿದ್ದೇನೆ, ಮತ್ತೊಬ್ಬರಿಗೆ ಸಹಾಯ ಮಾಡುವುದು ನನ್ನ ಕರ್ತವ್ಯ" ಎನ್ನುತ್ತಾರೆ.
ಇತ್ತೀಚಿನ ವರ್ಷಗಳಲ್ಲಿ ಕಂಡ ಅತ್ಯಂತ ಮಾರಣಾಂತಿಕ ಅಗ್ನಿ ಅವಘಡ ಇದಾಗಿದ್ದು, ಅಂದಿನ ದಿನದ ಪರಿಸ್ಥಿತಿಯನ್ನು ನೆನಪಿಸಿಕೊಂಡಿರುವ ದಯಾನಂದ್ ತಿವಾರಿ "ನಾನು ನನ್ನ ಸಹೋದರ ದಿನದ ಕೆಲಸವನ್ನು ಮುಗಿಸಿ ವಾಪಸ್ಸಾಗುತ್ತಿದ್ದ ವೇಳೆಯಲ್ಲಿ ಕಟ್ಟಡದಲ್ಲಿ ಹೊಗೆ ಕಂಡಿತು, ಮಂದಿ ಹೆದರಿದ್ದರು, ಕೆಲವರು ಕಟ್ಟಡದಲ್ಲಿ ಸಿಲುಕಿ ಸಹಾಯಕ್ಕಾಗಿ ಮೊರೆ ಇಡುತ್ತಿದ್ದರು. ತಕ್ಷಣವೇ ನಾವು ಅಗ್ನಿ ಶಾಮಕ ದಳದ ವಾಹನಕ್ಕೆ ಕಾಯದೇ ನುಗ್ಗಿದೆವು. ನಾವಿದ್ದ ಮತ್ತೊಂದು ಬದಿಯಲ್ಲಿ ಕಟ್ಟಡವಿತ್ತು, ಸಂಚಾರ ದಟ್ಟೆಣೆಯೂ ಇದ್ದ ಕಾರಣ ರಸ್ತೆ ವಿಭಜಕವನ್ನು ಮುರಿದು ಸ್ಥಳಕ್ಕೆ ತೆರಳಿದೆವು ಎನ್ನುತ್ತಾರೆ ದಯಾನಂದ್.
ಕಟ್ಟಡದಿಂದ ಪಾರಾಗಲು ಯಾವುದೇ ದಾರಿ ಇರಲಿಲ್ಲ. ಆದ್ದರಿಂದ ಅಲ್ಲೇ ಇದ್ದ ಕ್ರೇನ್ ಸಹಾಯದಿಂದ ಕಟ್ಟಡದ ಗಾಜಿನ ಪ್ಯಾನಲ್ ನ್ನು ಒಡೆದೆ. ಆ ಬಳಿಕವಷ್ಟೇ ಮಂದಿಯನ್ನು ಶೀಘ್ರವಾಗಿ ಸ್ಥಳದಿಂದ ಹೊರಕರೆತಂದು ರಕ್ಷಿಸಲು ಸಾಧ್ಯವಾಯಿತು. ಬೆಂಕಿ ಹೊತ್ತಿದ್ದ ಕಾರಣದಿಂದ ತಾಪಮಾನ ಹೆಚ್ಚಾಗಿ ಕಟ್ಟಡದಲ್ಲಿ ಹೊಗೆ ಆವರಿಸಿದ್ದರಿಂದ ಕಾಲ ಸರಿದಂತೆ ರಕ್ಷಣಾ ಕಾರ್ಯಾಚರಣೆ ಕಷ್ಟವಾಯಿತು. ಸಾಧ್ಯವೇ ಇಲ್ಲ ಎಂಬ ಹಂತಕ್ಕೆ ತಲುಪಿದಾಗ ನಾವು ರಕ್ಷಣಾ ಕಾರ್ಯಾಚರಣೆಯನ್ನು ನಿಲ್ಲಿಸಿದೆವು ಎನ್ನುತ್ತಾರೆ ದಯಾನಂದ್
ದಯಾನಂದ್ ಗೆ ಇಬ್ಬರು ಮಕ್ಕಳಿದ್ದು ಬಿಹಾರದ ಮೂಲದವರಾಗಿದ್ದು 25 ವರ್ಷಗಳ ಹಿಂದೆ ದೆಹಲಿಗೆ ಬಂದು ಮುಂಡ್ಕಾ ಪ್ರದೇಶದಲ್ಲೇ ವಾಸವಿದ್ದಾರೆ.