ಕಾಞಂಗಾಡು: ಎರಡು ತಿಂಗಳಿನಿಂದ ಕಾಸರಗೋಡು ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಗೆ ಒಂದೇ oಒಜu ಹಾವು ಅಡ್ಡಿಯಾಗಿದೆ. ಉರಾಳುಂಗಲ್ ಸೊಸೈಟಿಯು 54 ದಿನಗಳ ಕಾಲ ರಸ್ತೆ ನಿರ್ಮಾಣವನ್ನು ಸ್ಥಗಿತಗೊಳಿಸಿದೆ. ಹಾವು ಮೊಟ್ಟೆ ಇಡುತ್ತಿರುವುದರಿಂದ ನಿರ್ಮಾಣಕ್ಕೆ ಅಡ್ಡಿಯಾಗಿದೆ.
ಹಾವು 24 ಮೊಟ್ಟೆ ಇಡುವ ಸಲುವಾಗಿ ಕಾಮಗಾರಿ ಸ್ಥಗಿತಗೊಳಿಸಲಾಗಿತ್ತು. ಅರಣ್ಯ ಇಲಾಖೆಯೊಂದಿಗೆ ಸಮಾಲೋಚನೆ ನಡೆಸಿದ ನಂತರ ಸೊಸೈಟಿಯ ಕ್ರಮ ಕೈಗೊಂಡಿದೆ. 24 ಮೊಟ್ಟೆಗಳು ಒಡೆದಿವೆ. ಇದೀಗ ಹದಿನೈದು ಹಾವು ಮರಿಗಳನ್ನು ಕಾಡಿಗೆ ಕಳುಹಿಸಲಾಗಿದೆ. ಮುಂದಿನ ಒಂಬತ್ತು ಮರಿಗಳನ್ನು ಶೀಘ್ರದಲ್ಲೇ ಕಳುಹಿಸಲಾಗುವುದು ಎಂದು ಹಾವು ಹಿಡಿಯುವವರಾದ ಅಮೀನ್ ತಿಳಿಸಿದ್ದಾರೆ.
ರಸ್ತೆ ಕಾಮಗಾರಿ ವೇಳೆ ಕಂಡುಬಂದ ಹಾವನ್ನು ಸ್ಥಳಾಂತರಿಸಲು ಯತ್ನಿಸುತ್ತಿರುವಾಗ ಮೊಟ್ಟೆಗಳಿಗೆ ಕಾವು ನೀಡುತ್ತಿರುವುದು ಕಂಡುಬಂತು. ನಂತರ ಕಾಸರಗೋಡಿನ ಮೂಲದ ಹಾಗೂ ನೇಪಾಳದ ಮಿಥಿಲಾ ವೈಲ್ಡ್‍ಲೈಫ್ ಟ್ರಸ್ಟ್‍ನ ವನ್ಯಜೀವಿ ಸಂಶೋಧನಾ ಮುಖ್ಯಸ್ಥ ಮವೀಶ್ ಕುಮಾರ್ ಅವರನ್ನು ಸಂಪರ್ಕಿಸಿದಾಗ ಅವರು ಹಾವನ್ನು ಸ್ಥಳಾಂತರಿಸುವುದು ಸರಿಯಲ್ಲ ಎಂದು ಸಲಹೆ ನೀಡಿದರು.
ಹಾವು ಮೊಟ್ಟೆಯೊಡೆಯಲು 27 ಸೆಂಟಿಗ್ರೇಡ್ ನಿಂದ 31 ಸೆಂಟಿಗ್ರೇಡ್ ತಾಪಮಾನ ಬೇಕಾಗುತ್ತದೆ. ತಾಯಿ ಹಾವಿನ ಕಾವೂ ಬೇಕು. 54 ನೇ ದಿನ, ಮೊಟ್ಟೆಯೊಡೆದು ಮರಿಗಳು ಹೊರಬರಲು ಪ್ರಾರಂಭಿಸುತ್ತವೆ. ಮೊಟ್ಟೆಯೊಡೆಯಲು ಆರಂಭಿಸಿದಾಗ ತಾಯಿ ಹಾವು ಬೇಕೆಂದೇನೂ ಇಲ್ಲ. ಹಾಗಾಗಿ ಮೊಟ್ಟೆಯೊಡೆಯಲು ಪ್ರಾರಂಭಗೊಂಡ ಬಳಿಕ ಬೇರೆಡೆಗೆ ಮೊಟ್ಟೆಗಳನ್ನು ಸ್ಥಳಾಂತರಿಸಲಾಗಿದೆ. ಇದರೊಂದಿಗೆ ಸೋಮವಾರದಿಂದ ಮತ್ತೆ ರಸ್ತೆ ಕಾಮಗಾರಿ ಆರಂಭಗೊಂಡಿದೆ.