ಮುಂಬೈ: ಜೂನ್ 5 ರಂದು ನಿಗದಿಯಾಗಿದ್ದ ಅಯೋಧ್ಯೆ ಭೇಟಿಯನ್ನು ಮುಂದೂಡಲಾಗಿದೆ ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಶುಕ್ರವಾರ ಘೋಷಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಮ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ಉತ್ತರ ಪ್ರದೇಶದ ನನ್ನ ಪ್ರವಾಸವನ್ನು ಸದ್ಯಕ್ಕೆ ಮುಂದೂಡಲಾಗಿದೆ. ಮೇ 22 ರಂದು ಪುಣೆಯಲ್ಲಿ ನಡೆಯಲಿರುವ ರ್ಯಾಲಿಯಲ್ಲಿ ಈ ಬಗ್ಗೆ ಮಾತನಾಡುತ್ತೇನೆಂದು ಹೇಳಿದ್ದಾರೆ.
ರಾಜ್ ಠಾಕ್ರೆಯವರು ಅಯೋಧ್ಯೆ ಭೇಟಿ ಕುರಿತು ಹೇಳಿಕೆ ನೀಡುತ್ತಿದ್ದಂತೆಯೇ ಇತ್ತ ಉತ್ತರ ಪ್ರದೇಶದ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು, ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಈ ಹಿಂದೆ ಉತ್ತರ ಭಾರತೀಯರನ್ನು ರಾಜ್ ಠಾಕ್ರೆ ಅವಮಾನಿಸಿದ್ದು, ಈ ಕುರಿತು ಸಾರ್ವಜನಿಕ ಕ್ಷಮೆಯಾಚಿಸುವವರೆಗೂ ಉತ್ತರಪ್ರದೇಶ ಪ್ರವೇಶಿಸಲು ಅನುಮತಿಸುವುದಿಲ್ಲ ಎಂದು ಹೇಳಿದ್ದರು.
ಕೆಲ ದಿನಗಳ ಹಿಂದಷ್ಟೇ ಹೇಳಿಕೆ ನೀಡಿದ್ದ ರಾಜ್ ಠಾಕ್ರೆ ಅವರು, ಮೇ 4ರಿಂದ ಯಾವ ಮಸೀದಿಗಳ ಮೇಲೆ ಲೌಡ್ ಸ್ಪೀಕರ್‌ಗಳ ಮೂಲಕ ಆಜಾನ್ ಕೂಗಲಾಗುತ್ತದೆಯೋ ಅಲ್ಲಿ ಧ್ವನಿವರ್ಧಕಗಳ ಮೂಲಕ ಹನುಮಾನ್ ಚಾಲೀಸ ಪ್ರಸಾರ ಮಾಡಿ ಎಂದು ಕರೆ ನೀಡಿದ್ದರು.
ಮೇ 4ರೊಳಗೆ ಮಸೀದಿಗಳ ಮೇಲಿನ ಎಲ್ಲಾ ಧ್ವನಿವರ್ಧಕಗಳನ್ನು ತೆರವು ಮಾಡಲು ಸರ್ಕಾರಕ್ಕೆ ಗಡುವು ನೀಡಿದ್ದರು. ಆದರೆ, ಈ ಬಗ್ಗೆ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಬೆಂಬಲಿಗರಿಗೆ ಈ ಕರೆ ನೀಡಿದ್ದರು.
‘ಲೌಡ್ ಸ್ಪೀಕರ್‌ಗಳಲ್ಲಿ ಆಜಾನ್ ಕೇಳಿಸಿದರೆ, ಆ ಪ್ರದೇಶಲ್ಲಿ ಧ್ವನಿವರ್ಧಕಗಳ ಮೂಲಕ ಹನುಮಾನ್ ಚಾಲೀಸ ಪ್ರಸಾರ ಮಾಡಿ ಎಂದು ನಾನೂ ಹಿಂದೂಗಳಲ್ಲಿ ಮನವಿ ಮಾಡ್ತುತೇನೆ. ಆಗಷ್ಟೇ ಅವರಿಗೆ ಈ ಧ್ವನಿವರ್ಧಕಗಳ ಅಡಚಣೆ ಏನೆಂಬುದು ಅರ್ಥವಾಗುತ್ತದೆ ಎಂದಿದ್ದರು.