ಕುಂಬಳೆ : ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ನ ಕಾಸರಗೋಡು ವಲಯ ಸಮಿತಿ ನೇತೃತ್ವದಲ್ಲಿ ಹಮ್ಮಿಕೊಂಡ ಭಜನಾ ಅಭಿಮಾನ-ಅಭಿಯಾನ ಎಂಬ ಕಾರ್ಯಕ್ರಮ ಅನಂತಪುರ ಶ್ರೀಅನಂತ ಪದ್ಮನಾಭ ಕ್ಷೇತ್ರದ ಅನಂತಶ್ರೀ ಸಭಾಂಗಣದಲ್ಲಿ ಜರಗಿತು.
ತಿಂಗಳ 5ನೇ ಸರಣಿ ಕಾರ್ಯಕ್ರಮದಂಗವಾಗಿ ಆಯೋಜಿಸಿದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಕರಿಂಜೆ ಶ್ರೀ ಮುಕ್ತಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನಗೈದು, ಭಜನೆಯಿಂದ ಮನಸ್ಸು ಪರಿವರ್ತನೆ ಸಾಧ್ಯವಿದ್ದು ಪರಿಶುದ್ಧ ಮನದಲ್ಲಿ ಭಗವಂತ ನೆಲೆಸಲು ಸಾಧ್ಯ ಎಂದರು.
ಧಾರ್ಮಿಕ ಮುಂದಾಳು,ಭಜನಾ ಪರಿಷತ್ ಕಾಸರಗೋಡು ವಲಯಾಧ್ಯಕ್ಷ ಕೆ.ಎನ್. ವೆಂಕಟ್ರಮಣ ಹೊಳ್ಳ ಕಾಸರಗೋಡು ಸಭೆಯ ಅಧ್ಯಕ್ಷತೆವಹಿಸಿದ್ದರು. ಧ.ಮಂ. ಭಜನಾ ಪರಿಷತ್ ಗೌರವಾಧ್ಯಕ್ಷ ಜಯರಾಮ ನೆಲ್ಲಿತ್ತಾಯ, ವಿ.ಹಿಂ.ಪ. ಪ್ರಾಂತೀಯ ಪ್ರಮುಖ್ ಪ್ರೇಮಾನಂದ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಸಂಕಪ್ಪ ಭಂಡಾರಿ, ಅನಂತಪುರ ಕ್ಷೇತ್ರ ಆಡಳಿತ ಸಮಿತಿ ಅಧ್ಯಕ್ಷ ನ್ಯಾಯವಾದಿ ಉದಯ ಕುಮಾರ್ ಗಟ್ಟಿ, ದೇವಸ್ಥಾನದ ಪ್ರ.ಕಾರ್ಯದರ್ಶಿ ರಾಮಚಂದ್ರ ಭಟ್, ಭಜನಾ ಅಭಿಯಾನದ ಗೌರವಾಧ್ಯಕ್ಷ ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ, ಧ.ಗ್ರಾ.ಯೋಜನಾಧಿಕಾರಿ ಮುಖೇಶ್, ವಲಯ ಮೇಲ್ವಿಚಾರಕ ರಮೇಶ್ ಮೊದಲಾದವರು ಉಪಸ್ಥಿತರಿದ್ದರು.
ಮೀರಾ ಹರೀಶ್ ಗಟ್ಟಿ ಉಳಿಯ ಸ್ವಾಗತಿಸಿ, ರಾಮಕೃಷ್ಣ ಸಂತಡ್ಕ ವಂದಿಸಿದರು. ಕಾರ್ಯಕ್ರಮದಂಗವಾಗಿ ವಿವಿಧ ಭಜನಾ ಸಂಘಗಳಿಂದ ಭಜನೆ, ಶ್ರೀಶಕ್ತಿ ಮಕ್ಕಳ ಭಜನಾ ತಂಡ ಉಳಿಯತ್ತಡ್ಕ ಅವರಿಂದ ಕುಣಿತ ಭಜನೆ ಹಾಗೂ ಸಾಮೂಹಿಕ ಭಜನೆ ಜರಗಿತು.