ಭಾರತದಲ್ಲಿ ಒಟ್ಟು ಫಲವಂತಿಕೆಯ ದರವು 2.2ರಿಂದ 2.0ಕ್ಕೆ ಇಳಿಕೆಯಾಗಿದ್ದು, ಜನಸಂಖ್ಯಾ ನಿಯಂತ್ರಣ ಕ್ರಮಗಳಲ್ಲಿ ಗಣನೀಯ ಪ್ರಗತಿಯನ್ನು ಸಾಧಿಸಲಾಗಿದೆ ಎಂದು ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆ (ಎನ್‌ಎಫ್‌ಎಚ್‌ಎಸ್-5)ಯ ಐದನೆ ಸುತ್ತಿನ ವರದಿ ತಿಳಿಸಿದೆ.
ಒಟ್ಟು ಫಲವಂತಿಕೆಯ ದರ(ಟಿಎಫ್‌ಆರ್)ವನ್ನು ಪ್ರತಿ ಮಹಿಳೆಗೆ ಇರುವ ಸರಾಸರಿ ಮಕ್ಕಳ ಸಂಖ್ಯೆಯಿಂದ ಅಳೆಯಲಾಗುತ್ತದೆ.
ಬಿಹಾರ (2.98), ಮೇಘಾಲಯ 2.91, ಉತ್ತರಪ್ರದೇಶ (2.35) ಹಾಗೂ ಜಾರ್ಖಂಡ್ (2.26), ಮಣಿಪುರ (2.17) ಸೇರಿದಂತೆ ಕೇವಲ ಐದು ರಾಜ್ಯಗಳಲ್ಲಿ ಮಾತ್ರ ಫಲವಂತಿಕೆಯ ದರವು 2.1ಕ್ಕಿಂತ ಅಧಿಕವಾಗಿದೆ.
ಭಾರತದಾದ್ಯಂತ 28 ರಾಜ್ಯಗಳು ಹಾಗೂ8 ಕೇಂದ್ರಾಡಳಿತ ಪ್ರದೇಶಗಳ ಒಟ್ಟು 707 ಜಿಲ್ಲೆಗಳಲ್ಲಿನ 6.37 ಕುಟುಂಬಗಳನ್ನು ಮಾದರಿಯಾಗಿ ತೆಗೆದುಕೊಂಡು ಎನ್‌ಎಫ್‌ಎಚ್‌ಎಸ್ 5 ಸಮೀಕ್ಷಾ ವರದಿ ತಿಳಿಸಿದೆ. 7,24,115 ಮಹಿಳೆಯರು ಹಾಗೂ 1,01,389 ಪುರುಷರು ಈ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರು.
ದೇಶದಲ್ಲಿ ಒಟ್ಟಾರೆ ಗರ್ಭನಿರೋಧಕತೆ ಪ್ರಮಾಣ (ಸಿಪಿಆರ್)ವು ಶೇ.54ರಿಂದ ಶೇ.67ಕ್ಕೇರಿದೆ.
ಹೆಚ್ಚು ಕಡಿಮೆ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಆಧುನಿಕ ಗರ್ಭನಿರೋಧಕ ವಿಧಾನಗಳ ಬಳಕೆಯು ಅಧಿಕವಾಗಿದೆ. ಕುಟುಂಬ ಯೋಜನೆ ಕುರಿತ ಅವಶ್ಯಕತೆಗಳ ಅಲಭ್ಯತೆಯ ಪ್ರಮಾಣವು ಶೇ.13ರಿಂದ ಶೇ.9ಕ್ಕಿಳಿದೆ.
ದೇಶದಲ್ಲಿ ಆಸ್ಪತ್ರೆ, ಚಿಕಿತ್ಸಾ ಕೇಂದ್ರಗಳಂತಹ ಸಾಂಸ್ಥಿಕ ಸ್ಥಳಗಳಲ್ಲಿ ಹೆರಿಗೆಯ ಪ್ರಮಾಣವು ಶೇ.79ರಿಂದ ಶೇ.89ಕ್ಕೇರಿದೆ. ಗ್ರಾಮಾಂತರ ಪ್ರದೇಶಗಳಲ್ಲಿಯೂ ಶೇಕಡಾ 87ರಷ್ಟು ಜನನಗಳು ಸಾಂಸ್ಥಿಕವಾಗಿಯೇ (ಆಸ್ಪತ್ರೆ, ಆರೋಗ್ಯ ಕೇಂದ್ರಗಳಲ್ಲಿ) ನಡೆದರೆ, ನಗರಪ್ರದೇಶಗಳಲ್ಲಿ ಅದು ಶೇ.94 ಆಗಿದೆ.
ಅರುಣಾಚಲಪ್ರದೇಶದಲ್ಲಿ ಸಾಂಸ್ಥಿಕವಾಗಿ ಜನನಗಳ ಪ್ರಮಾಣದಲ್ಲಿ ಶೇ.27ರಷ್ಟು ಹೆಚ್ಚಳವಾಗಿದ್ದು, ಇದು ದೇಶದಲ್ಲೇ ಅತ್ಯಧಿಕ ಏರಿಕೆಯಾಗಿದೆ. ಅಸ್ಸಾಂ, ಬಿಹಾರ, ಮೇಘಾಲಯ, ಚತ್ತೀಸ್ಗಢ, ನಾಗಾಲ್ಯಾಂಡ್, ಮಣಿಪುರ, ಉತ್ತರಪ್ರದೇಶ ಹಾಗೂ ಪಶ್ಚಿಮಬಂಗಾಳ ರಾಜ್ಯಗಳಲ್ಲಿ ಶೇ.10ರಷ್ಟು ಏರಿಕೆಯಾಗಿದೆ. ಕಲೆದ ಐದು ವರ್ಷಗಳಲ್ಲಿ 91 ಶೇಕಡಕ್ಕೂ ಅಧಿಕ ಜಿಲ್ಲೆಗಳಲ್ಲಿ ಶೇ.70ಕ್ಕೂ ಅಧಿಕ ಜನನಗಳು ಆರೋಗ್ಯ ಕೇಂದ್ರಗಳಲ್ಲಿ ನಡೆದಿವೆ.
ಕಳೆದ ನಾಲ್ಕು ವರ್ಷಗಳಲ್ಲಿ, ದೇಹದ ಬೆಳವಣಿಗೆ ಕುಂಠಿತಗೊಂಡಿರುವ ಐದು ವರ್ಷಕ್ಕಿಂತ ಕೆಳಗಿನ ವಯಸ್ಸಿನ ಮಕ್ಕಳ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆಯೆಂದು ಸಮೀಕ್ಷಾ ವರದಿ ತಿಳಿಸಿದೆ.
ದೇಹದ ಬೆಳವಣಿಗೆ ಕುಂಠಿತವಾಗಿರುವ ಮಕ್ಕಳ ಸಂಖ್ಯೆಯು ನಗರಪ್ರದೇಶಗಳಿಗೆ ಹೋಲಿಸಿದರೆ (ಶೇ.30), ಗ್ರಾಮೀಣ ಪ್ರದೇಶಗಳಲ್ಲಿ (ಶೇ.37) ಅಧಿಕವಾಗಿದೆ.
ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆ 4ಕ್ಕೆ ಹೋಲಿಸಿದರೆ, ಹಾಲಿ ಸಮೀಕ್ಷೆಯಲ್ಲಿ ಬಹುತೇಕ ರಾಜ್ಯಗಳು, ಕೇಂದ್ರಾಡಳಿತಗಳಲ್ಲಿ ಅಧಿಕ ದೇಹತೂಕ ಹಾಗೂ ಬೊಜ್ಜು ದೇಹಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಮಹಿಳೆಯರಲ್ಲಿ ಬೊಜ್ಜುದೇಹಿಗಳ ಸಂಖ್ಯೆಯಲ್ಲಿ ಶೇ.19ರಿಂದ ಶೇ.23ಕ್ಕೇ ಏರಿಕೆಯಾಗಿದೆ. ಕೇರಳ, ಅಂಡಮಾನ್ ನಿಕೋಬಾರ್ ದ್ವೀಪಗಳು, ಆಂಧ್ರಪ್ರದೇಶ, ಗೋವಾ, ಸಿಕ್ಕಿಂ, ಮಣಿಪುರ, ಪಂಜಾಬ್, ಚಂಡೀಗಢ ಹಾಗೂ ಲಕ್ಷದ್ವೀಪದಲ್ಲಿ ಶೇ.34ರಿಂದ ಶೇ.36ರಷ್ಟು ಮಂದಿ ಅಧಿಕ ದೇಹತೂಕವುಳ್ಳವರು ಇಲ್ಲವೇ ಬೊಜ್ಜು ದೇಹವನ್ನು ಹೊಂದಿದ್ದಾರೆ.