ಪತ್ತನಂತಿಟ್ಟ: ಯುವಕನಿಂದ ಅತ್ಯಾಚಾರಕ್ಕೆ ಒಳಗಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 65 ವರ್ಷದ ವೃದ್ಧೆ ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ಅಸುನೀಗಿದ್ದಾಳೆ. ಅಂಬಾಲಪುಳದಲ್ಲಿ ಈ ಘಟನೆ ನಡೆದಿದೆ.
ಅತ್ಯಾಚಾರಕ್ಕೆ ಒಳಗಾದ ಬಳಿಕ ಗಂಭೀರವಾಗಿ ಗಾಯಗೊಂಡಿದ್ದ ವೃದ್ಧೆಯನ್ನು ಸಂಬಂಧಿಕರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು. ನರ್ಸ್ ಬಳಿ ನಡೆದ ಎಲ್ಲ ಘಟನೆಯನ್ನು ವೃದ್ಧೆ ವಿವರಿಸಿದರು. ನಂತರ ಹೆಚ್ಚಿನ ಚಿಕಿತ್ಸೆಗೆಂದು ಪೆರುಮಾಳದಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆದರೆ, ಚಿಕಿತ್ಸೆ ಫಲಕಾರಿಯಾಗದೇ ಘಟನೆ ನಡೆದ ಮೂರು ದಿನಗಳ ನಂತರ ವೃದ್ಧೆ ಕೊನೆಯುಸಿರೆಳೆದಿದ್ದಾರೆ.
ಸಾವಿಗೆ ನಿಖರವಾದ ಕಾರಣ ಸದ್ಯಕ್ಕೆ ತಿಳಿದುಬಂದಿಲ್ಲ. ಮರಣೋತ್ತರ ಪರೀಕ್ಷೆಯ ನಂತರವೇ ದೃಢಪಡಿಸಬಹುದು ಎಂದು ವೈದ್ಯರು ಹೇಳಿದ್ದಾರೆ. ವಿದೇಶದಲ್ಲಿ ನೆಲೆಸಿರುವ ಪತಿ ಮತ್ತು ಮಗನನ್ನು ವೃದ್ಧೆ ಅಗಲಿದ್ದಾರೆ. ಆರೋಪಿ ಸುನೀಶ್ಗೆ ವೃದ್ಧೆಯ ಬಗ್ಗೆ ಮೊದಲಿಂದಲೂ ತಿಳಿದಿತ್ತು ಮತ್ತು ಪರಿಚಯವೂ ಇತ್ತು. ಇದನ್ನೇ ದುರ್ಬಳಕೆ ಮಾಡಿಕೊಂಡು ಮನೆಗೆ ನುಗ್ಗಿ ಕೃತ್ಯ ಎಸಗಿದ್ದಾನೆ.
ಈ ಪ್ರಕರಣಕ್ಕೆ ಸಾಕ್ಷಿಗಳಿರಲಿಲ್ಲ. ಸಿಸಿಟಿವಿ ದೃಶ್ಯಾವಳಿಗಳನ್ನು ಬಳಸಿಕೊಂಡು ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ. ಸುನೀಶ್ ಪತ್ತನಂತಿಟ್ಟದಲ್ಲಿರುವ ತನ್ನ ಸ್ಥಳದಿಂದ ಕೊಚ್ಚಿಗೆ ತೆರಳಿರುವುದು ಪತ್ತೆಯಾಗಿದ್ದು, ಅಲ್ಲಿಯೇ ಬಂಧಿಸಿ ಕರೆತರಲಾಗಿದೆ.