ಕುಂಬಳೆ: ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ನ ಕಾಸರಗೋಡು ವಲಯ ಸಮಿತಿ ನೇತೃತ್ವದಲ್ಲಿ ಹಮ್ಮಿಕೊಂಡ ಭಜನಾ ಅಭಿಮಾನ-ಅಭಿಯಾನ ಎಂಬ ಕ್ಷೇತ್ರ ಸಂಕೀರ್ತನಾ ಯಾನದ 6ನೇ ಸರಣಿ ಕಾರ್ಯಕ್ರಮ ಮುಂಡಪ್ಪಳ್ಳ ದರ್ಬಾರ್ ಕಟ್ಟೆಯ ಶ್ರೀರಾಜರಾಜೇಶ್ವರೀ ಕ್ಷೇತ್ರದಲ್ಲಿ ಭಾನುವಾರ ಜರಗಿತು.
ಕಾರ್ಯಕ್ರಮದಂಗವಾಗಿ ಆಯೋಜಿಸಿದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಭಜರಂಗದಳದ ಸಂಚಾಲಕ ಮುರಳಿಕೃಷ್ಣ ಹಸಂತ್ತಡ್ಕ ಮುಖ್ಯ ಧಾರ್ಮಿಕ ಭಾಷಣಗೈದು,
ಜಗತ್ತಿನ ಅತ್ಯಂತ ಶ್ರೇಷ್ಠ ಧಾರ್ಮಿಕ ಪರಂಪರೆ ಉಳಿಸಬೇಕಾದ್ದು ನಮ್ಮ ಕರ್ತವ್ಯ. ಧರ್ಮ ಶ್ರದ್ಧಾ ಕೇಂದ್ರಗಳಲ್ಲಿ ತನ್ನ ಸ್ವಾರ್ಥವನ್ನು ಮೆರೆಸದೆ ಸಾಮಾಜಿಕ ಸ್ವಾಸ್ಥ್ಯಕ್ಕಾಗಿ ಪ್ರಾರ್ಥಿಸಬೇಕಾಗಿದೆ. ಆದ್ದರಿಂದ ನಾಡು ಒಳಿತಾಗುವುದು ಸಾಮಾಜಿಕ ಸಮಷ್ಠಿ ಮೂಡುವುದು ಆದ್ದರಿಂದ ಭಜನೆ ಎಂಬುದು ಹಿಂದೂ ಜಾಗೃತಿ ಸಾಧ್ಯ ಎಂದರು.
ಧಾರ್ಮಿಕ ಮುಂದಾಳು, ಭಜನಾ ಪರಿಷತ್ ಕಾಸರಗೋಡು ವಲಯಾಧ್ಯಕ್ಷ ಕೆ.ಎನ್. ವೆಂಕಟ್ರಮಣ ಹೊಳ್ಳ ಕಾಸರಗೋಡು ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ಭಜನೆಯ ಮೇಲೆ ಅಭಿಮಾನವಿರಿಸಿ ಆರಂಭಿಸಿದ ಸರಣಿ ಕಾರ್ಯಕ್ರಮ ಧಾರ್ಮಿಕ ವಲಯದಲ್ಲಿ ಸಂಚಲನ ಸೃಷ್ಠಿಸಿದ್ದು ಎಲ್ಲರ ಸಹಕಾರದಲ್ಲಿ ಮುಂದೊಂದು ಇತಿಹಾಸ ನಿರ್ಮಾಣ ಸಾಧ್ಯವಾಗಲಿ ಎಂದರು. ಭಜನಾ ಅಭಿಯಾನದ ಗೌರವಾಧ್ಯಕ್ಷ ಹರಿದಾಸ
ಜಯಾನಂದ ಕುಮಾರ್ ಹೊಸದುರ್ಗ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿ.ಹಿಂ.ಪ. ಜಿಲ್ಲಾ ಕಾರ್ಯದರ್ಶಿ ಸಂಕಪ್ಪ ಭಂಡಾರಿ, ಅನಂತಪುರ ಕ್ಷೇತ್ರ ಆಡಳಿತ ಸಮಿತಿಯ ವಿನಯ ಕೆ.ಕೆ.ಶೆಟ್ಟಿ, ಮಂಜುನಾಥ ಆಳ್ವ ಮಡ್ವ,
,ಧ.ಗ್ರಾ.ಯೋಜನಾಧಿಕಾರಿ ಮುಖೇಶ್, ಭಜನಾ ಮಂಜೇಶ್ವರ ವಲಯ ಸಂಚಾಲಕ ರಾಮಕೃಷ್ಣ ಸಂತಡ್ಕ ಮೊದಲಾದವರು ಉಪಸ್ಥಿತರಿದ್ದರು.
ನೇತ್ರಾವತಿ ಯೋಗೀಶ ಆಚಾರ್ಯ ಸ್ವಾಗತಿಸಿ, ಯಶೋಧ ವಾಸುದೇವ ಉಳಿಯತ್ತಡ್ಕ ವಂದಿಸಿದರು. ರೋಹಿತಾಕ್ಷ ಕೊಲ್ಯ ಮಧೂರು ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಂಗವಾಗಿ ವಿವಿಧ ಭಜನಾ ಸಂಘಗಳಿಂದ ಭಜನೆ, ಕುಣಿತ ಭಜನೆ ಹಾಗೂ ಸಾಮೂಹಿಕ ಭಜನೆ ಜರಗಿತು.