ಪುಣೆ: 2015ರಲ್ಲಿ ಬಿಡುಗಡೆಗೊಂಡ ನಟ ಸಲ್ಮಾನ್ ಖಾನ್ ಅಭಿನಯದ ಸೂಪರ್ಹಿಟ್ ಜನರಚಿತ್ರ ಬಜರಂಗಿ ಭಾಯಿಜಾನ್ ಬಹುತೇಕ ಮಂದಿ ನೋಡಿರಲಿಕ್ಕೆ ಸಾಕು. ಭಾರತದಲ್ಲಿ ಹೇಗೋ ತಪ್ಪಿಸಿಕೊಂಡು ಬರುವ ಪಾಕಿಸ್ತಾನದ ಪುಟ್ಟ ಬಾಲಕಿಯನ್ನು ಮರಳಿ ಪಾಕಿಸ್ತಾನಕ್ಕೆ ಹೀರೋ ಕಳುಹಿಸುವ ಕಥೆಯಿರುವ ಚಿತ್ರವಿದು.
ಆದರೆ ಚಿತ್ರದಲ್ಲಿ ಬಾಲಕಿಯನ್ನು ವಾಪಸ್ ಕಳಿಸಲು ಹೀರೋ ಸಕ್ಸಸ್ ಆದರೆ, ನಿಜ ಜೀವನದ ಈ ಘಟನೆಯಲ್ಲಿ ಬಾಲಕಿಯಾಗಿದ್ದಾಗ ಭಾರತದಲ್ಲಿ ಸಿಲುಕಿದಾಕೆ ಇದೀಗ ಬರೋಬ್ಬರಿ 75 ವರ್ಷಗಳ ಬಳಿಕ ಅಂದರೆ ತನ್ನ 90ನೇ ವಯಸ್ಸಿನಲ್ಲಿ ತನ್ನ ನೆಲ ಪಾಕಿಸ್ತಾನವನ್ನು ಸೇರಿದ್ದಾಳೆ.
ಈಕೆಯ ಹೆಸರು ರೀನಾ ವರ್ಮಾ. 1947ರ ಮೇ ತಿಂಗಳಿನಲ್ಲಿ ಇವರಿಗೆ 15 ವರ್ಷ ವಯಸ್ಸು. ಆಗ ಇವರು ಪಾಕಿಸ್ತಾನದಲ್ಲಿ ಇದ್ದರು. ಆದರೆ ಭಾರತ-ಪಾಕಿಸ್ತಾನ ವಿಭಜನೆಯಾದಾಗ ಜನಾಂಗೀಯ ಗಲಭೆಗಳ ಭಯದಿಂದ ಪಾಕಿಸ್ತಾನದ ರಾವಲ್ಪಿಂಡಿಯ ಪ್ರೇಮ್ ಸ್ಟ್ರೀಟ್‌ನಲ್ಲಿರುವ ತಮ್ಮ ಮನೆಯನ್ನು ಬಿಟ್ಟು ಅವರು ಭಾರತಕ್ಕೆ ಬಂದು ಹಿಮಾಚಲ ಪ್ರದೇಶದಲ್ಲಿದ್ದರು.
ಗಲಭೆ ತೀವ್ರಗೊಂಡ ಹಿನ್ನೆಲೆಯಲ್ಲಿ ಅವರು ಪಾಕ್ಗೆ ಮರಳುವ ಆಗಲೇ ಇಲ್ಲ. ಆದರೆ ಮನೆ ಸೇರುವ ಆಸೆ ಮಾತ್ರ ಬಿಟ್ಟಿರಲಿಲ್ಲ. ಇದೀಗ 75 ವರ್ಷಗಳ ಬಳಿಕ ಅವರ ಈ ಆಸೆ ಈಡೇರುತ್ತಿದೆ.
ಫೇಸ್ಬುಕ್ನಲ್ಲಿ ಪಾಕಿಸ್ತಾನದವರನ್ನು ಪರಿಚಯ ಮಾಡಿಕೊಂಡಿದ್ದ ರೀನಾ, ಅಲ್ಲಿ ಈ ವಿಷಯವನ್ನು ಹೇಳುತ್ತಲಿದ್ದರು. ತಮ್ಮ ಮನೆ ಇರುವ ಪ್ರದೇಶದ ಬಗ್ಗೆ ತಿಳಿಸಿದ್ದರು. ಆಗ ಅಲ್ಲಿದ್ದವರು ರಾವಲ್ಪಿಂಡಿಯಲ್ಲಿ ಇರುವ ಅವರ ಮನೆಯನ್ನು ವಿಡಿಯೋ ಮೂಲಕ ತೋರಿಸಿದ್ದಾರೆ. ಆ ಮನೆ ಇನ್ನೂ ಇರುವುದು ರೀನಾ ಅವರನ್ನು ಆನಂದದಲ್ಲಿ ತೇಲಿಸಿದೆ. ಭಾರತ - ಪಾಕಿಸ್ತಾನ ವಿಭಜನೆ ಆಗುವುದಕ್ಕೂ ಮುನ್ನ ರೀನಾ ಅವರ ತಂದೆ ರಾವಲ್ಪಿಂಡಿಯಲ್ಲಿ ನಿರ್ಮಾಣ ಮಾಡಿದ್ದ ಮನೆ ಇನ್ನೂ ಅಲ್ಲಿಯೇ ಹಾಗೆಯೇ ಇರುವುದು ರೀನಾ ಅವರ ಕಣ್ಣುಗಳಲ್ಲಿ ಆನಂದಬಾಷ್ಪ ತರಿಸಿದೆ.
ಗುರುಗ್ರಾಮದಲ್ಲಿ ವಾಸಿಸುವ ರೀನಾ ಅವರ ಮಗಳು ಸೋನಾಲಿ, ಕಳೆದ ವರ್ಷ ವೀಸಾಕ್ಕೆ ಅರ್ಜಿ ಸಲ್ಲಿಸಲು ಸಹಾಯ ಮಾಡಿದ್ದರು. ಆದರೆ, ವೀಸಾ ಅರ್ಜಿ ತಿರಸ್ಕೃತಗೊಂಡಿತ್ತು. ಈ ಬಗ್ಗೆ ಪಾಕಿಸ್ತಾನಿ ಪತ್ರಕರ್ತೆಯೊಬ್ಬರು ಅಜ್ಜಿಯ ವಿಡಿಯೋ ಮಾಡಿದ್ದರು.
ಈ ವಿಡಿಯೋ ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವೆ ಹೀನಾ ರಬ್ಬಾನಿ ಖಾರ್ ಅವರ ಗಮನಕ್ಕೆ ಬಂದಿತ್ತು. ಬಳಿಕ ರೀನಾ ಅವರಿಗೆ ವೀಸಾವೂ ದೊರೆತಿದೆ. ಈ ಮೂಲಕ ರಾವಲ್ಪಿಂಡಿಯಲ್ಲಿರುವ ತಮ್ಮ ಮನೆಗೆ ಭೇಟಿ ನೀಡಲು ಸಾಧ್ಯವಾಗುತ್ತಿರುವುದಕ್ಕೆ ರೀನಾ ತುಂಬಾ ಖುಷಿಯಾಗಿದ್ದಾರೆ. ಆ ಮನೆಯಲ್ಲಿ ಯಾರಿದ್ದಾರೆ ಎಂಬುದು ಗೊತ್ತಿಲ್ಲ, ಆದರೆ ಮನೆಯನ್ನು ನೋಡುವ ಆಸೆ ಇದೆ. ಅವರು ನನಗೆ ಮನೆ ನೋಡಲು ಕೊಡುತ್ತಾರೆ ಎಂಬ ನಂಬಿಕೆ ಇದೆ ಎನ್ನುತ್ತಾರೆ ಈ ಹಣ್ಣು ಹಣ್ಣು ಅಜ್ಜಿ. ಶೀಘ್ರದಲ್ಲಿ ತಾಯ್ನಾಡಿನ ನೆಲವನ್ನು ಸ್ಪರ್ಶಿಸಲಿದ್ದಾರೆ ಅಜ್ಜಿ.