ನವದೆಹಲಿ: ಹಠಾತ್ ಬೆಳವಣಿಗೆಯೊಂದರಲ್ಲಿ, ಕಾಂಗ್ರೆಸ್ ಹಿರಿಯ ನಾಯಕ ಪಿ ಚಿದಂಬರಂ ವಿರುದ್ಧ ದಾಖಲಾಗಿರುವ ಹೊಸ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರಿಗೆ ಸಂಬಂಧಿಸಿದ ನಿವೇಶನಗಳ ಮೇಲೆ ಸಿಬಿಐ ಮಂಗಳವಾರ ಹಠಾತ್ ದಾಳಿ ನಡೆಸಿದೆ.
ಸದ್ಯ ದೆಹಲಿ, ಮುಂಬೈ, ಚೆನ್ನೈ ಸೇರಿದಂತೆ ದೇಶದ 7 ಕಡೆಗಳಲ್ಲಿ ಸಿಬಿಐ ಅಧಿಕಾರಿಗಳ ಶೋಧ ಕಾರ್ಯ ನಡೆಯುತ್ತಿದೆ. ಮೂಲಗಳ ಪ್ರಕಾರ, ಅವರ ಪುತ್ರ ಮತ್ತು ಲೋಕಸಭಾ ಸಂಸದ ಕಾರ್ತಿ ಚಿದಂಬರಂ ಕೂಡ ಸಿಬಿಐ ತಪಾಸಣೆಗೊಳಪಟ್ಟಿದ್ದಾರೆ.
ಆಗಸ್ಟ್ 21, 2019 ರಂದು, ಐಎನ್‌ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಪಿ ಚಿದಂಬರಂ ಅವರನ್ನು ಸಿಬಿಐ ಬಂಧಿಸಿತ್ತು. ಅಕ್ಟೋಬರ್ 16, 2019 ರಂದು ತನ್ನ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅವರನ್ನು ಕಸ್ಟಡಿಗೆ ತೆಗೆದುಕೊಂಡಿತು. ಆರು ದಿನಗಳ ನಂತರ ಸಿಬಿಐ ದಾಖಲಿಸಿದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನಿಂದ ಜಾಮೀನು ಪಡೆದರೂ, ಇಡಿ ಪ್ರಕರಣದಲ್ಲಿ ತಿಹಾರ್ ಜೈಲಿನಲ್ಲಿ ಮುಂದುವರಿಯಬೇಕಾಗಿ ಬಂತು.
ಅಂತಿಮವಾಗಿ, ಡಿಸೆಂಬರ್ 4, 2019 ರಂದು ಇಡಿ ಪ್ರಕರಣದಲ್ಲಿ 100 ದಿನಗಳ ನಂತರ ಜಾಮೀನು ಪಡೆದು ಹೊರಬಂದರು. ಇತ್ತೀಚೆಗೆ, ವಿಶೇಷ ನ್ಯಾಯಾಲಯವು ಐಎನ್‌ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಚಾರ್ಜ್ ಶೀಟ್ ನ್ನು ಪರಿಗಣನೆಗೆ ತೆಗೆದುಕೊಂಡಿತ್ತು. ಎಲ್ಲಾ ಆರೋಪಿಗಳ ವಿರುದ್ಧ ಪ್ರಕರಣದಲ್ಲಿ ಮುಂದುವರಿಯಲು ಸಾಕಷ್ಟು ಪುರಾವೆಗಳಿವೆ ಎಂದು ಹೇಳಿತ್ತು.
ಅದರ ಭಾಗವಾಗಿ ಇಂದಿನ ದಾಳಿ ಮುಂದುವರಿದಿದೆ ಎಂದು ಹೇಳಲಾಗುತ್ತಿದೆ.