ಲಡಾಕ್: ಜಮ್ಮು-ಕಾಶ್ಮೀರದ ಲಡಾಕ್ ನಲ್ಲಿ ಶುಕ್ರವಾರ ಭಾರೀ ಅಪಘಾತ ಸಂಭವಿಸಿದ್ದು 7 ಮಂದಿ ಯೋಧರು ಹುತಾತ್ಮರಾಗಿದ್ದಾರೆ. ಹಲವರು ಗಾಯಗೊಂಡಿದ್ದಾರೆ.
26 ಮಂದಿ ಸೈನಿಕರು ಸೇನಾ ವಾಹನದಲ್ಲಿ ಸಾಗುತ್ತಿದ್ದ ವೇಳೆ ಸ್ಕಿಡ್ ಆಗಿ ಲಡಾಕ್ ನಲ್ಲಿ ಶ್ಯೋಕ್ ನದಿಗೆ ಬಿದ್ದಿದೆ. 26 ಮಂದಿ ಸೈನಿಕರ ತಂಡವು ಪಾರ್ತಾಪುರದ ಟ್ರಾನ್ಸಿಟ್ ಕ್ಯಾಂಪ್‌ನಿಂದ ಉಪ ವಲಯದ ಹನೀಫ್‌ನ ಮುಂದಿನ ಸ್ಥಳಕ್ಕೆ ತೆರಳುತ್ತಿತ್ತು. ವಾಹನವು ರಸ್ತೆಯಿಂದ ಸ್ಕಿಡ್ ಆಗಿ ಶ್ಯೋಕ್ ನದಿಯಲ್ಲಿ ಬಿದ್ದಿತು, ಇದರ ಪರಿಣಾಮವಾಗಿ ಎಲ್ಲಾ ಪ್ರಯಾಣಿಕರಿಗೆ ಗಾಯಗಳಾಗಿವೆ ಎಂದು ಭಾರತೀಯ ಸೇನೆಯು ಹೇಳಿಕೆಯಲ್ಲಿ ತಿಳಿಸಿದೆ.
ಎಲ್ಲಾ 26 ಸೈನಿಕರನ್ನು ಸೇನಾ ಕ್ಷೇತ್ರ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಲೇಹ್‌ನಿಂದ ಶಸ್ತ್ರಚಿಕಿತ್ಸಾ ತಂಡಗಳನ್ನು ಪಾರ್ತಾಪುರಕ್ಕೆ ರವಾನಿಸಲಾಯಿತು. ಇವರಲ್ಲಿ ಏಳು ಮಂದಿ ಹುತಾತ್ಮರಾಗಿದ್ದಾರೆ.
"ಗಾಯಗೊಂಡವರಿಗೆ ಉತ್ತಮ ವೈದ್ಯಕೀಯ ಆರೈಕೆಯನ್ನು ಒದಗಿಸಲಾಗುತ್ತಿದೆ. ಗಂಭೀರವಾಗಿ ಗಾಯಗೊಂಡವರನ್ನು ವೆಸ್ಟರ್ನ್ ಕಮಾಂಡ್‌ಗೆ ಸ್ಥಳಾಂತರಿಸಲು ವಾಯುಪಡೆಯಿಂದ ನೆರವನ್ನು ಕೋರಲಾಗಿದೆ'' ಎಂದು ಭಾರತೀಯ ಸೇನೆ ತಿಳಿಸಿದೆ.