ನವದೆಹಲಿ: ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು ಮೇ 30ಕ್ಕೆ ಎಂಟನೇ ವರ್ಷ ಪೂರ್ಣಗೊಳಿಸಲಿದೆ. ಈ ದಿನವನ್ನು ಅದ್ದೂರಿಯಾಗಿ ಆಚರಿಸಲು ಬಿಜೆಪಿ ನಿರ್ಧರಿಸಿದ್ದು, ಮೇ 25 ರಂದು ರೂಪುರೇಷೆ ತಯಾರಿಗಾಗಿ ವರಿಷ್ಠರ ಸಭೆಯನ್ನು ಕರೆಯಲಾಗಿದೆ.
ಮೇ 30 ರಿಂದ ಜೂನ್ 14 ರವರೆಗೆ ಸೇವೆ, ಉತ್ತಮ ಆಡಳಿತ ಮತ್ತು ಬಡವರ ಕಲ್ಯಾಣ, ಥೀಮ್ ನೊಂದಿಗೆ ಕಾರ್ಯಕ್ರಮ ಆಯೋಜಿಸಲು ಬಿಜೆಪಿ ಯೋಜಿಸಿದೆ. ಮೇ 25 ರಂದು ದೆಹಲಿಯಲ್ಲಿನ ಪಕ್ಷದ ಕೇಂದ್ರ ಕಚೇರಿಯಲ್ಲಿ ಕೇಂದ್ರ ಸಚಿವರ ಸಭೆಯನ್ನು ಆಯೋಜಿಸಲಾಗುತ್ತಿದೆ. ಇದರಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಗೃಹ ಸಚಿವ ಅಮಿತ್ ಶಾ, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಪಾಲ್ಗೊಳ್ಳಲಿದ್ದಾರೆ.
ಮೋದಿ ಸರ್ಕಾರದ ಎಂಟನೇ ವರ್ಷಾಚರಣೆ ದಿನದಂದು ಮಾಡಬೇಕಾದ ಕಾರ್ಯಗಳ ಕುರಿತಂತೆ ಸಭೆಯಲ್ಲಿ ನಿರ್ಧರಿಸಲಾಗುತ್ತದೆ. 8 ವರ್ಷಗಳ ಅವಧಿಯಲ್ಲಿ ಮೋದಿ ಸರ್ಕಾರ ಮಾಡಿರುವ ಕೆಲಸಗಳು, ವಿವಿಧ ಯೋಜನೆಗಳನ್ನು ಜನರಿಗೆ ತಲುಪಿಸುವ ವಿಧಾನ ಈ ಸಭೆಯ ಕಾರ್ಯಸೂಚಿಯಾಗಿದೆ. ಎಲ್ಲಾ ಕ್ಷೇತ್ರಗಳಲ್ಲಿ ಪ್ರತಿಯೊಂದು ಯೋಜನೆಗಳನ್ನು ತಲುಪಿಸುವ ಉದ್ದೇಶದೊಂದಿಗೆ ಪ್ರತಿ ಸಚಿವರಿಗೆ ಎರಡು ಲೋಕಸಭಾ ಕ್ಷೇತ್ರಗಳನ್ನು ನೀಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.