ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಜೈಶ್-ಎ-ಮೊಹಮ್ಮದ್(ಜೆಇಎಂ) ಭಯೋತ್ಪಾದಕ ಘಟಕವನ್ನು ಭೇದಿಸಿದ್ದು, ಎಂಟು ಉಗ್ರಗಾಮಿ ಸಹಚರರನ್ನು ಬಂಧಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನಿರ್ದಿಷ್ಟ ಮಾಹಿತಿ ಆಧಾರದ ಮೇಲೆ, ಹಲವಾರು ಶಂಕಿತರ ಚಲನವಲನ ಮೇಲೆ ಕಣ್ಣೀಡಲಾಗಿತ್ತು. ಇದರ ಪರಿಣಾಮವಾಗಿ ದಕ್ಷಿಣ ಕಾಶ್ಮೀರ ಜಿಲ್ಲೆಯ ಅವಂತಿಪೋರಾ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿರುವ ಭಯೋತ್ಪಾದನಾ ಘಟಕವನ್ನು ಭೇದಿಸಲಾಯಿತು ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.
ಬಂಧಿತರನ್ನು ಮುಷ್ತಾಕ್ ಅಹ್ಮದ್ ದಾರ್, ಇಶ್ಫಾಕ್ ಅಹ್ಮದ್ ದಾರ್, ಮಂಜೂರ್ ಅಹ್ಮದ್ ದಾರ್, ಫಯಾಜ್ ಅಹ್ಮದ್ ರಾಥರ್, ಶಬೀರ್ ಅಹ್ಮದ್, ಮೊಹಮ್ಮದ್ ಲತೀಫ್, ಶೀರಾಜ್ ಅಹ್ಮದ್ ಮಿರ್ ಮತ್ತು ವಸೀಮ್ ಅಹ್ಮದ್ ಭಟ್.
ಬಂಧಿತರಿಂದ ಮದ್ದುಗುಂಡುಗಳು ಸೇರಿದಂತೆ ದೋಷಾರೋಪಣೆಯ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ, ಅಪರಾಧ ಕೃತ್ಯಕ್ಕೆ ಬಳಸಿದ್ದ ವಾಹನವನ್ನೂ ವಶಪಡಿಸಿಕೊಳ್ಳಲಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ.
ಬಂಧಿತ ಭಯೋತ್ಪಾದಕ ಸಹಚರರು ಇಬ್ಬರು ಸಕ್ರಿಯ ಜೆಇಎಂ ಭಯೋತ್ಪಾದಕರಾದ ಮೊಂಗಮಾ ನಿವಾಸಿ ಆಸಿಫ್ ಶೇಖ್ ಮತ್ತು ಸೈದಾಬಾದ್ ಪಸ್ತೂನಾ ತ್ರಾಲ್ ನಿವಾಸಿ ಅಜಾಜ್ ಭಟ್ ಅವರಿಗೆ ಆಶ್ರಯ, ಲಾಜಿಸ್ಟಿಕ್ಸ್ ಮತ್ತು ಶಸ್ತ್ರಾಸ್ತ್ರ / ಮದ್ದುಗುಂಡುಗಳ ಸಾಗಣೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದರು. ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಪ್ರಗತಿಯಲ್ಲಿದೆ ಎಂದು ವಕ್ತಾರರು ತಿಳಿಸಿದ್ದಾರೆ.