ಕೊಲಂಬೊ: ಭೀಕರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಲಂಕೆಯಲ್ಲಿ ಹಿಂಸಾಚಾರ ಇದೀಗ ತೀವ್ರ ಸ್ವರೂಪಕ್ಕೆ ತಿರುಗಿದ್ದು ಸತ್ತವರ ಸಂಖ್ಯೆ ಎಂಟಕ್ಕೆ ಏರಿಕೆಯಾಗಿದೆ. ಇನ್ನು ದೇಶದಲ್ಲಿ ಹಿಂಸಾಚಾರ ಮತ್ತು ಸೇಡಿನ ಕೃತ್ಯಗಳನ್ನು ನಿಲ್ಲಿಸುವಂತೆ ಜನರನ್ನು ಶ್ರೀಲಂಕಾ ಅಧ್ಯಕ್ಷ ಗೋತಬಯ ರಾಜಪಕ್ಸೆ ಒತ್ತಾಯಿಸಿದ್ದು ರಾಷ್ಟ್ರ ಎದುರಿಸುತ್ತಿರುವ ರಾಜಕೀಯ ಮತ್ತು ಆರ್ಥಿಕ ಬಿಕ್ಕಟ್ಟನ್ನು ಪರಿಹರಿಸುವ ಪ್ರತಿಜ್ಞೆ ಮಾಡಿದ್ದಾರೆ.
ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸೆ ಅವರ ಬೆಂಬಲಿಗರು ಸರ್ಕಾರಿ ವಿರೋಧಿ ಪ್ರತಿಭಟನಾಕಾರರ ಮೇಲೆ ದಾಳಿ ಮಾಡಿದ ನಂತರ ಹಿಂಸಾಚಾರ ತೀವ್ರ ಸ್ವರೂಪಕ್ಕೆ ತಿರುಗಿದೆ. ಕೊಲಂಬೊ ಮತ್ತು ದೇಶದ ಇತರ ಭಾಗಗಳಲ್ಲಿ ನಡೆದ ಹಿಂಸಾಚಾರದಲ್ಲಿ ಸುಮಾರು 250 ಜನರು ಗಾಯಗೊಂಡಿದ್ದಾರೆ.
ಭೀಕರ ಆರ್ಥಿಕ ಬಿಕ್ಕಟ್ಟಿನ ಮಧ್ಯೆ ಆಡಳಿತಾರೂಢ ಸರ್ಕಾರದ ವಿರುದ್ಧ ಅಸಹನೆ ಹೆಚ್ಚಾಗುತ್ತಿದ್ದು ರಾಜಪಕ್ಸೆ ಕುಟುಂಬಕ್ಕೆ ಸೇರಿದ ಪೂರ್ವಜರ ಮನೆಯನ್ನು ಪ್ರತಿಭಟನಾಕಾರರ ಗುಂಪು ಸುಟ್ಟು ಹಾಕಿದ್ದು ಇದಾದ ನಂತರ ದ್ವೀಪ ರಾಷ್ಟ್ರದಾದ್ಯಂತ ಕರ್ಫ್ಯೂ ಜಾರಿ ಮಾಡಲಾಗಿದೆ. ಇನ್ನು ಮಹಿಂದಾ ರಾಜಪಕ್ಸೆ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೂ, ಇದು ಶಾಂತತೆಯನ್ನು ತರಲು ವಿಫಲವಾಗಿದೆ.
ರಾಜಕೀಯ ಸಂಬಂಧಗಳನ್ನು ಲೆಕ್ಕಿಸದೆ ನಾಗರಿಕರ ವಿರುದ್ಧದ ಹಿಂಸಾಚಾರ ಮತ್ತು ಸೇಡಿನ ಕೃತ್ಯಗಳನ್ನು ನಿಲ್ಲಿಸಲು ನಾನು ಜನರನ್ನು ಶಾಂತವಾಗಿರಲು ಮನವಿ ಮಾಡುತ್ತೇನೆ. ಸಾಂವಿಧಾನಿಕವಾಗಿ ಮತ್ತು ಆರ್ಥಿಕ ಬಿಕ್ಕಟ್ಟನ್ನು ಪರಿಹರಿಸಲು ಒಮ್ಮತದ ಮೂಲಕ ರಾಜಕೀಯ ಸ್ಥಿರತೆಯನ್ನು ಪುನಃಸ್ಥಾಪಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುವುದು ಎಂದು ಅಧ್ಯಕ್ಷ ಗೋತಬಯ ಟ್ವೀಟ್ ಮಾಡಿದ್ದಾರೆ. ಹಲವು ಮಾಜಿ ಮಂತ್ರಿಗಳು ಮತ್ತು ರಾಜಕಾರಣಿಗಳ ಮನೆಗಳನ್ನು ಸುಟ್ಟು ಹಾಕಿದ ನಂತರ ಗೋತಬಯ ಮಾಡಿದ ಮೊದಲ ಟ್ವೀಟ್ ಇದಾಗಿದೆ.
ಶ್ರೀಲಂಕಾದ ಅಟಾರ್ನಿ ಜನರಲ್ ದೇಶದಲ್ಲಿ ಸರ್ಕಾರದ ವಿರೋಧಿ ಮತ್ತು ಪರ ಪ್ರತಿಭಟನಾಕಾರರ ನಡುವಿನ ಹಿಂಸಾತ್ಮಕ ಘರ್ಷಣೆಗಳ ಬಗ್ಗೆ ತುರ್ತು ಮತ್ತು ಪೂರ್ಣ ಪ್ರಮಾಣದ ತನಿಖೆ ನಡೆಸುವಂತೆ ಪೊಲೀಸ್ ಮುಖ್ಯಸ್ಥರನ್ನು ಕೇಳಿದ್ದಾರೆ.
ರಾಜಪಕ್ಸೆ ಕುಟುಂಬದ ನಿಷ್ಠಾವಂತರು ದೇಶದಿಂದ ಪಲಾಯನ ಮಾಡುವುದನ್ನು ತಡೆಯಲು ಸರ್ಕಾರಿ ವಿರೋಧಿ ಪ್ರತಿಭಟನಾಕಾರರು ಕೊಲಂಬೊದ ಬಂಡಾರನಾಯಕೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವ ರಸ್ತೆಯಲ್ಲಿ ಚೆಕ್‌ಪೋಸ್ಟ್ ಅನ್ನು ಸ್ಥಾಪಿಸಿದ್ದಾರೆ.
ಸೋಮವಾರ, ಹಂಬನ್‌ತೋಟದಲ್ಲಿರುವ ರಾಜಪಕ್ಸೆ ಅವರ ಪೂರ್ವಜರ ಮನೆ, 14 ಮಾಜಿ ಸಚಿವರು, ಮಾಜಿ ಉಪ ಸ್ಪೀಕರ್ ಸೇರಿದಂತೆ 18 ಶಾಸಕರು ಮತ್ತು ರಾಜಪಕ್ಸೆ ಕುಟುಂಬಕ್ಕೆ ನಿಷ್ಠರಾಗಿರುವ ನಾಯಕರ ಮನೆಗಳ ಮೇಲೆ ಪ್ರತಿಭಟನಾಕಾರರು ದಾಳಿ ನಡೆಸಿದರು.