ಹೋಶಿಯಾರ್‌ಪುರ: ಪಂಜಾಬ್‌ನ ಹೋಶಿಯಾರ್‌ಪುರದಲ್ಲಿ 100 ಅಡಿ ಆಳದ ಬೋರ್‌ವೆಲ್‌ಗೆ ಬಿದ್ದಿದ್ದ ಆರು ವರ್ಷದ ಬಾಲಕನನ್ನು ರಕ್ಷಿಸಲಾಗಿತ್ತು. ಆದರೆ ದುರ್ವಿಧಿ ಬಾಲಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.
ಹೋಶಿಯಾರ್‌ಪುರದ ಬೈರಾಂಪುರ ಸಮೀಪದ ಖ್ಯಾಲಾ ಬುಲಂಡಾ ಗ್ರಾಮದಲ್ಲಿ ಬೀದಿ ನಾಯಿಗಳಿಂದ ತಪ್ಪಿಸಿಕೊಳ್ಳುವ ವೇಳೆ 6 ವರ್ಷದ ಬಾಲಕ ರಿತಿಕ್ ಕೊಳವೆಬಾವಿಗೆ ಬಿದ್ದಿದ್ದನು. ಬಳಿಕ ಸೇನಾ ಸಿಬ್ಬಂದಿ 9 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಮಗುವನ್ನು ಬೋರ್‌ವೆಲ್‌ನಿಂದ ಹೊರತೆಗೆದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ವೇಳೆ ಮಗು ಸಾವನ್ನಪ್ಪಿದೆ.
ರಿತಿಕ್ ಮೈದಾನದಲ್ಲಿ ಆಟವಾಡುತ್ತಿದ್ದಾಗ ಈ ಘಟನೆ ನಡೆದಿದ್ದು, ಈ ವೇಳೆ ಕೆಲ ಬೀದಿ ನಾಯಿಗಳು ಆತನ ಹಿಂದೆ ಬಿದ್ದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ವೇಳೆ ಓಡಿ ಹೋಗಿ ಸೆಣಬಿನ ಚೀಲಗಳಿಂದ ಮುಚ್ಚಲಾಗಿದ್ದ ಬೋರ್‌ವೆಲ್ ಶಾಫ್ಟ್ ಮೇಲೆ ಹತ್ತಿದ ಪರಿಣಾಮ ಬಾಲಕನ ಭಾರ ತಾಳಲಾರದೆ ಹೊಂಡಕ್ಕೆ ಬಿದ್ದಿದ್ದಾನೆ. ಈ ಹುಡುಗ ವಲಸೆ ಕಾರ್ಮಿಕರ ಕುಟುಂಬಕ್ಕೆ ಸೇರಿದವನು.
ಹೊರತೆಗೆಯುವಾಗ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ರಿತಿಕ್
ಅಧಿಕಾರಿಗಳ ಪ್ರಕಾರ, ರಿತಿಕ್ ಅವರನ್ನು ಹೊರಗೆ ತೆಗೆಯುವಾಗ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.