ಕೊಲ್ಲಂ: ಇಡೀ ಕೇರಳ ರಾಜ್ಯವೇ ಕಂಬನಿ ಮಿಡಿದಿದ್ದ ಯುವ ವೈದ್ಯೆ ವಿಸ್ಮಯ ಸಾವಿನ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಆರೋಪಿ ಪತಿ ಕಿರಣ್ ಕುಮಾರ್ನಿಂದ ಎದುರಿಸಿದ ಕಿರುಕುಳದ ಬಗ್ಗೆ ತಂದೆಯೊಂದಿಗೆ ವಿಸ್ಮಯ ಮಾತನಾಡಿರುವ ಆಡಿಯೋ ಇದೀಗ ಬೆಳಕಿಗೆ ಬಂದಿದೆ.
ನೀವೆಲ್ಲರು ನನ್ನನ್ನು ಇಲ್ಲಿಯೇ ಬಿಟ್ಟು ಹೋದರೆ, ಇನ್ನೆಂದು ನೀವು ನನ್ನನ್ನು ನೋಡುವುದಿಲ್ಲ. ನನ್ನ ಕೈಯಲ್ಲಿ ಸಹಿಸಲಾಗುತ್ತಿಲ್ಲ ಅಪ್ಪ. ನನಗೆ ತುಂಬಾ ಭಯವಾಗುತ್ತಿದೆ ಎಂದು ಮೃತ ವಿಸ್ಮಯ ತಂದೆಯ ಜತೆಗೆ ಮಾತನಾಡಿರುವ ಆಡಿಯೋ ಬೆಳಕಿಗೆ ಬಂದಿದೆ. ವಿಚಾರಣೆ ವೇಳೆ ಈ ಆಡಿಯೋವನ್ನು ಕೋರ್ಟ್‌ಗೆ ಪ್ರಸ್ತುತ ಪಡಿಸಿದ್ದು, ಇದೀಗ ಮಾಧ್ಯಮಗಳಿಗೂ ಲಭ್ಯವಾಗಿದೆ. ಮದುವೆಯಾದ ಒಂಬತ್ತನೇ ದಿನಕ್ಕೆ ವಿಸ್ಮಯ ಮತ್ತು ತಂದೆಯ ನಡುವಿನ ಸಂಭಾಷಣೆ ಇದಾಗಿದೆ.
ವಿಸ್ಮಯ ಸಾವು ಪ್ರಕರಣದಲ್ಲಿ ಕೊಲ್ಲಂನ ಹೆಚ್ಚುವರಿ ಸೆಷನ್ಸ್ ಕೋರ್ಟ್ನ ನ್ಯಾಯಧೀಶ ಕೆ.ಎನ್. ಸುಜಿತ್ ನಾಳೆ ತೀರ್ಪು ನೀಡಲಿದ್ದಾರೆ. ಭಾರತೀಯ ದಂಡ ಸಂಹಿತೆಯ ಏಳು ಸೆಕ್ಷನ್ ಅಡಿಯಲ್ಲಿ ವಿಸ್ಮಯ ಪತಿ ಕಿರಣ್ ಕುಮಾರ್ ವಿರುದ್ಧ ಪ್ರಕರಣಗಳು ದಾಖಲಾಗಿವೆ. ವಿಸ್ಮಯಳ ಮೊದಲ ಮರಣ ವಾರ್ಷಿಕೋತ್ಸವಕ್ಕೂ ಮುನ್ನವೇ ವಿಚಾರಣೆಯನ್ನು ಪೂರ್ಣಗೊಳಿಸಿದ್ದು, ಇದೀಗ ತೀರ್ಪು ಪ್ರಕಟವಾಗಲಿದೆ. ಈ ಪ್ರಕರಣದಲ್ಲಿ 42 ಸಾಕ್ಷಿಗಳು, 120 ದಾಖಲೆಗಳು ಮತ್ತು 12 ಪ್ರಧಾನ ಸಾಕ್ಷಿಗಳಿವೆ. ಪ್ರಕರಣದ ವಿಚಾರಣೆ ಕಳೆದ ಜನವರಿ 10 ರಂದು ಪ್ರಾರಂಭವಾಯಿತು. ನಾಳೆ ತೀರ್ಪು ಹೊರಬೀಳಲಿದೆ.
ಪ್ರಕರಣ ಹಿನ್ನೆಲೆ ಏನು?
ವಿಸ್ಮಯ ಆತ್ಮಹತ್ಯೆ ಪ್ರಕರಣ ಇಡೀ ಕೇರಳದಲ್ಲಿ ಭಾರೀ ಸಂಚಲನ ಸೃಷ್ಟಿಸಿತ್ತು. ಗಂಡ ಕಿರಣ್ ಕುಮಾರ್ ಹಣ ದಾಹಕ್ಕೆ ಯುವ ವೈದ್ಯೆ ಸಾವಿನ ಹಾದಿ ಹಿಡಿದಳು. ಅದಕ್ಕೂ ಮುಂಚೆ ಗಂಡನ ಅಸಲಿ ಮುಖವಾಡವನ್ನು ಮೃತ ವೈದ್ಯೆ ಬಿಚ್ಚಿಟ್ಟಿದ್ದಳು. ಅಷ್ಟಕ್ಕೂ ಆಕೆಯ ಗಂಡ ಅನಾಗರಿಕನೇನಲ್ಲ. ಆದರೆ, ಆತ ಮಾಡಿದ ಕೆಲಸ ಮಾತ್ರ ನಾಗರಿಕ ಸಮಾಜ ತಲೆತಗ್ಗಿಸುವಂಥದ್ದು, ವೃತ್ತಿಯಲ್ಲಿ ಕೇರಳದ ಮೋಟಾರು ವಾಹನ ವಿಭಾಗದ ಅಧಿಕಾರಿಯಾಗಿದ್ದ. ಒಳ್ಳೆಯ ಉದ್ಯೋಗ, ಕೈತುಂಬ ಸಂಬಳ ಪಡೆಯುತ್ತಿದ್ದರೂ ಆತನ ಅತಿಯಾದ ದುರಾಸೆ ಯುವ ವೈದ್ಯೆಯ ಪ್ರಾಣವನ್ನೇ ಕಸಿದುಕೊಂಡಿತು. ಅದಕ್ಕೆ ಶಿಕ್ಷೆಯಾಗಿ ಕೇರಳ ಸರ್ಕಾರ ಆರೋಪಿಯ ಸರ್ಕಾರಿ ಕೆಲಸವನ್ನೇ ಕಸಿದುಕೊಂಡು ಕಂಬಿ ಹಿಂದೆ ತಳ್ಳಿತ್ತು.
2020ರ ಮೇ ತಿಂಗಳಲ್ಲಿ ವಿಸ್ಮಯ ಮತ್ತು ಕಿರಣ್ ಇಬ್ಬರು ಮದುವೆ ಆಗಿದ್ದರು. ವಿಸ್ಮಯಳ ಮದುವೆಯನ್ನ ಕುಟುಂಬಸ್ಥರು ಅದ್ದೂರಿಯಾಗಿ ಮಾಡಿಕೊಟ್ಟಿದ್ದರು. ದಂಪತಿ ಇಬ್ಬರೂ ಕೇರಳದ ಕೊಲ್ಲಂನಲ್ಲಿ ವಾಸವಿದ್ದರು. ಆದರೆ, ಗಂಡನ ಹಣದಾಹ ಮತ್ತು ಕಿರುಕುಳ ಸಹಿಸದೇ 2021 ಜೂನ್ 21ರ ಸೋಮವಾರ ಬೆಳಗ್ಗೆ ಗಂಡನ ಮನೆಯಲ್ಲಿಯೇ ವಿಸ್ಮಯ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ದೇಹದ ಮೇಲೆ ಗಾಯದ ಗುರುತುಗಳಾಗಿತ್ತು. ಗಂಡನ ಹಣದಾಹಕ್ಕೆ ವಿಸ್ಮಯ ಬಲಿಯಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿತ್ತು. ಸಾವಿಗೂ ಮುನ್ನ ಅಂದರೆ ಭಾನುವಾರ ರಾತ್ರಿ ವಾಟ್ಸ್‌ಆಯಪ್ ಮತ್ತು ಫೇಸ್ಬುಕ್ನಲ್ಲಿಯೂ ಸೋದರ ಸಂಬಂಧಿ ಜತೆ ಚಾಟ್ ಮಾಡಿದ್ದ ವಿಸ್ಮಯ, ಬಹುಶಃ ಇದೇ ನನ್ನ ಕೊನೇ ಮೆಸೇಜ್ ಆಗಬಹುದು. ಗಂಡನ ಕಿರುಕುಳ ಸಹಿಸಲಾಗ್ತಿಲ್ಲ ಎಂದು ಹೇಳಿದ್ದರು. ಗಂಡ ಹಿಂಸೆ ನೀಡಿರುವ ಕೆಲವು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದರು.
ಈ ಪ್ರಕರಣದಲ್ಲಿ ಕಿರಣ್ ಕುಮಾರ್ ಬಂಧನವಾಗಿತ್ತು. ಇದೀಗ ಆರೋಪಿಗೆ ಸುಪ್ರೀಂಕೋರ್ಟ್ ಜಾಮೀನು ನೀಡಿದೆ. ಆತನ ವಿರುದ್ಧ ಇನ್ನು ಅನೇಕ ಪ್ರಕರಣಗಳಿವೆ. ಆತನಿಗೆ ಜಾಮೀನು ಸಿಕ್ಕಿರುವುದು ಅನೇಕ ಮಂದಿಗೆ ಬೇಸರವಾಗಿರುವುದರಲ್ಲಿ ಸಂಶಯವೇ ಇಲ್ಲ.