ಮುಂಬೈ: ಮಹಾರಾಷ್ಟ್ರದಲ್ಲಿ ಆಜಾನ್-ಹನುಮಾನ್ ಚಾಲೀಸಾ ವಿವಾದ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಈ ನಡುವಲ್ಲೇ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಬುಧವಾರ ಶಿವಸೇನೆ ಸಂಸ್ಥಾಪಕ ದಿವಂಗತ ಬಾಳ ಠಾಕ್ರೆ ಅವರ ಹಳೆಯ ಭಾಷಣವನ್ನು ಟ್ವೀಟರ್ ನಲ್ಲಿ ಹಂಚಿಕೊಂಡಿದ್ದಾರೆ.
ರಾಜ್ ಠಾಕ್ರೆಯವರು ಹಂಚಿಕೊಂಡಿರುವ ವಿಡಿಯೋದಲ್ಲಿ, ಬಾಳ ಠಾಕ್ರೆಯವರು, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ನಾವು ನಮಾಜ್ ನಿಲ್ಲಿಸುತ್ತೇವೆ. ರಸ್ತೆಗಳು ಮತ್ತು 'ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ತೆಗೆದುಹಾಕುವುದು ಜನರಿಗೆ ಅನನುಕೂಲತೆಯನ್ನು ಉಂಟುಮಾಡುತ್ತದೆ' ಎಂದು ಹೇಳಿರುವುದು ಕಂಡು ಬಂದಿದೆ.
ನಿನ್ನೆಯಷ್ಟೇ ಹೇಳಿಕೆ ನೀಡಿದ್ದ ಮಹಾರಾಷ್ಟ್ರ ನವನಿರ್ಮಾನ ಸೇನಾದ ಮುಖ್ಯಸ್ಥ ರಾಜ್ ಠಾಕ್ರೆ ಅವರು, ಮೇ 4ರಿಂದ ಯಾವ ಮಸೀದಿಗಳ ಮೇಲೆ ಲೌಡ್ ಸ್ಪೀಕರ್‌ಗಳ ಮೂಲಕ ಆಜಾನ್ ಕೂಗಲಾಗುತ್ತದೆಯೋ ಅಲ್ಲಿ ಧ್ವನಿವರ್ಧಕಗಳ ಮೂಲಕ ಹನುಮಾನ್ ಚಾಲೀಸ ಪ್ರಸಾರ ಮಾಡಿ ಎಂದು ಕರೆ ನೀಡಿದ್ದರು.
ಮೇ 4ರೊಳಗೆ ಮಸೀದಿಗಳ ಮೇಲಿನ ಎಲ್ಲಾ ಧ್ವನಿವರ್ಧಕಗಳನ್ನು ತೆರವು ಮಾಡಲು ಸರ್ಕಾರಕ್ಕೆ ಗಡುವು ನೀಡಿದ್ದರು. ಆದರೆ, ಈ ಬಗ್ಗೆ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಬೆಂಬಲಿಗರಿಗೆ ಈ ಕರೆ ನೀಡಿದ್ದರು.
‘ಲೌಡ್ ಸ್ಪೀಕರ್‌ಗಳಲ್ಲಿ ಆಜಾನ್ ಕೇಳಿಸಿದರೆ, ಆ ಪ್ರದೇಶಲ್ಲಿ ಧ್ವನಿವರ್ಧಕಗಳ ಮೂಲಕ ಹನುಮಾನ್ ಚಾಲೀಸ ಪ್ರಸಾರ ಮಾಡಿ ಎಂದು ನಾನೂ ಹಿಂದೂಗಳಲ್ಲಿ ಮನವಿ ಮಾಡ್ತುತೇನೆ. ಆಗಷ್ಟೇ ಅವರಿಗೆ ಈ ಧ್ವನಿವರ್ಧಕಗಳ ಅಡಚಣೆ ಏನೆಂಬುದು ಅರ್ಥವಾಗುತ್ತದೆ ಎಂದಿದ್ದರು.
ಹೇಳಿಕೆ ಸಂಬಂಧ ರಾಜ್ ಠಾಕ್ರೆ ವಿರುದ್ಧ ಔರಂಜಅಬಾದ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಠಾಕ್ರೆ ವಿರುದ್ಧ ಸಿಟಿ ಚೌಕ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 153 (ದಂಗೆಗೆ ಉದ್ದೇಶಪೂರ್ವಕ ಪ್ರಚೋದನೆ), 116(ಅಪರಾಧಕ್ಕೆ ಪ್ರಚೋದನೆ), 117 (10ಕ್ಕಿಂತ ಹೆಚ್ಚು ಜನರಿಂದ ಅಪರಾಧಕ್ಕೆ ಕುಮ್ಮಕ್ಕು)ಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅಲ್ಲದೇ ರಾಜ್ ಠಾಕ್ರೆ ಅವರ ರಾರಯಲಿಯ ಆಯೋಜಕರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ.
ರಾಜ್ ಠಾಕ್ರೆ ಕರೆ ನೀಡಿದ ಬೆನ್ನಲ್ಲೇ ಇದೀಗ ಎಂಎನ್ಎಸ್ ಕಾರ್ಯಕರ್ತರು ಮುಂಬೈನ ಮಸೀದಿಯ ಬಳಿ ಹನುಮಾನ್ ಚಾಲೀಸಾ ನುಡಿಸಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಎಲ್ಲೆಡೆ ಬಿಗಿ ಭದ್ರತೆಯನ್ನು ನಿಯೋಜಿಸಲಾಗಿದೆ.