ನವದೆಹಲಿ:ನೋಯ್ಡಾದಲ್ಲಿ ಅಪರಿಚಿತ ಹಂತಕರ ಗುಂಡಿಗೆ ಬಲಿಯಾದ ಆರು ವರ್ಷದ ಬಾಲಕಿ ರೋಲಿ ಪ್ರಜಾಪತಿಯ ಪೋಷಕರು ತಮ್ಮ ಮಗಳ ಅಂಗಾಂಗಗಳನ್ನು ದಾನ ಮಾಡಿ ಐದು ಜೀವಗಳನ್ನು ಉಳಿಸಲು ನೆರವಾಗಿದ್ದಾರೆ.
ಆರು ವರ್ಷದ ಈ ಬಾಲಕಿ ಹೊಸದಿಲ್ಲಿಯ ಎಐಐಎಂಎಸ್ ಇತಿಹಾಸದಲ್ಲೇ ಅತ್ಯಂತ ಕಿರಿಯ ಅಂಗಾಂಗ ದಾನಿ ಎಂಬ ಇತಿಹಾಸ ಸೃಷ್ಟಿಸಿದ್ದಾಳೆ.
ತಲೆಗೆ ಗುಂಡೇಟು ತಗುಲಿದ್ದ ಆರು ವರ್ಷದ ಬಾಲಕಿ ರೋಲಿಯನ್ನು ಆಸ್ಪತ್ರೆಗೆ ಕರೆ ತರಲಾಗಿತ್ತು. ಗಾಯದ ತೀವ್ರತೆಯಿಂದ ತಕ್ಷಣವೇ ಆಕೆ ಪ್ರಜ್ಞಾಶೂನ್ಯಳಾದಳು. ಬಾಲಕಿಯನ್ನು ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಕರೆದೊಯ್ಯಲಾಯಿತು. ಪುಟ್ಟ ಬಾಲಕಿಯ ಜೀವ ಉಳಿಸುವ ಪ್ರಯತ್ನಗಳು ವಿಫಲವಾದಾಗ, ವೈದ್ಯರು ಬಾಲಕಿಯ ಮೆದುಳು ನಿಷ್ಕ್ರಿಯವಾಗಿರುವುದನ್ನು ಪ್ರಕಟಿಸಿದರು.
"ಮಗು ರೋಲಿಯನ್ನು ಎಪ್ರಿಲ್ 27ರಂದು ಆಸ್ಪತ್ರೆಗೆ ಕರೆ ತರಲಾಗಿತ್ತು. ಆಕೆಗೆ ಗುಂಡೇಟಿನ ಗಾಯವಾಗಿತ್ತು ಹಾಗೂ ಮೆದುಳಿಗೆ ಗುಂಡು ಹೊಕ್ಕಿತ್ತು. ಮೆದುಳು ಸಂಪೂರ್ಣ ಹಾನಿಯಾಗಿತ್ತು. ಬಹುತೇಕ ಮೆದುಳು ನಿಷ್ಕ್ರಿಯವಾದ ಸ್ಥಿತಿಯಲ್ಲಿ ಆಸ್ಪತ್ರೆಗೆ ಮಗುವನ್ನು ದಾಖಲಿಸಲಾಗಿತ್ತು. ಆದ್ದರಿಂದ ನಾವು ಕುಟುಂಬ ಸದಸ್ಯರ ಜತೆ ಮಾತನಾಡಿದೆವು" ಎಂದು ಎಐಐಎಂಎಸ್‍ನ ಹಿರಿಯ ನರಶಾಸ್ತ್ರಜ್ಞ ಡಾ.ದೀಪಕ್ ಗುಪ್ತಾ ಹೇಳಿದರು.
ನಮ್ಮ ವೈದ್ಯರು ಬಾಲಕಿಯ ಅಂಗಾಂಗ ದಾನದ ಬಗ್ಗೆ ಪೋಷಕರ ಜತೆ ಮಾತನಾಡಿದರು. ಪೋಷಕರಿಗೆ ಕೌನ್ಸಿಲಿಂಗ್ ಮಾಡಿ ಇತರ ಮಕ್ಕಳ ಜೀವ ಉಳಿಸಲು ಅಂಗಾಂಗ ದಾನಕ್ಕೆ ಅವರ ಒಪ್ಪಿಗೆ ಪಡೆದೆವು ಎಂದು ವಿವರಿಸಿದರು.
ಬಾಲಕಿಯ ಲಿವರ್, ಕಿಡ್ನಿಗಳು, ಕಣ್ಣುಗಳು ಮತ್ತು ಹೃದಯ ವಾಲ್ವ್ ದಾನದಿಂದಾಗಿ ಐದು ಮಂದಿಯ ಜೀವ ಉಳಿಸಲಾಗಿದೆ ಎಂದು ವೈದ್ಯರು ಪೋಷಕರ ನಿರ್ಧಾರವನ್ನು ಶ್ಲಾಘಿಷಿಸಿದ್ದಾರೆ.
1994ರಲ್ಲಿ ಎಐಐಎಂಎಸ್‍ನಲ್ಲಿ ಅಂಗಾಂಗ ದಾನ ಆರಂಭವಾದ ಬಳಿಕ ಅಂಗಾಂಗ ದಾನ ಮಾಡಿದ ಅತ್ಯಂತ ಕಿರಿಯಳಾಗಿ ರೋಲಿ ದಾಖಲೆಗೆ ಸೇರಿದಳು.