ಪ್ಯಾರಿಸ್: ಪ್ರಧಾನಿ ನರೇಂದ್ರ ಮೋದಿ ಯುರೋಪ್ ಪ್ರವಾಸದ ಭಾಗವಾಗಿ ಫ್ರಾನ್ಸ್ ಗೆ ಭೇಟಿ ನೀಡಿದ್ದು, ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರಾನ್ ಅವರನ್ನು ಪ್ಯಾರಿಸ್ ನಲ್ಲಿ ಭೇಟಿ ಮಾಡಿದ್ದಾರೆ.
ಉಭಯ ನಾಯಕರು ದ್ವಿಪಕ್ಷೀಯ ಮಾತುಕತೆ, ಪರಸ್ಪರ ಹಿತಾಸಕ್ತಿಯ ವಿಷಯಗಳು, ಉಕ್ರೇನ್ ವಿರುದ್ಧ ರಷ್ಯಾ ಆಕ್ರಮಣದ ನಡುವೆ ಪ್ರಾದೇಶಿಕ ಹಾಗೂ ಜಾಗತಿಕ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.
ಪ್ರಧಾನಿಗಳ ಕಚೇರಿ ಈ ಬಗ್ಗೆ ಟ್ವೀಟ್ ಮಾಡಿದ್ದು, ಪ್ರಧಾನಿ ಮೋದಿ ಹಾಗೂ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರಾನ್ ಪ್ಯಾರಿಸ್ ನಲ್ಲಿ ಭೇಟಿ ಮಾಡಿದ್ದು, ಈ ಭೇಟಿ ಭಾರತ-ಫ್ರಾನ್ಸ್ ಸ್ನೇಹ ಸಂಬಂಧಕ್ಕೆ ಮತ್ತಷ್ಟು ಉತ್ತೇಜನ ನೀಡಲಿದೆ ಎಂದು ಹೇಳಿದೆ.
ಇಬ್ಬರು ಸ್ನೇಹಿತರ ಭೇಟಿ. ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರಾನ್ ಅವರ ಮರು ಆಯ್ಕೆ ಭಾರತ-ಫ್ರಾನ್ಸ್ ನ ಕಾರ್ಯತಂತ್ರದ ಪಾಲುದಾರಿಕೆಗೆ ಉತ್ತೇಜನ ನೀಡುವುದಕ್ಕೆ ಅವಕಾಶವಾಗಲಿದೆ ಎಂದು ವಿದೇಶಾಂಗ ವ್ಯವಹಾರಗಳ ವಕ್ತಾರ ಅರಿಂದಮ್ ಬಗಚಿ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಕಳೆದ ಒಂದು ವಾರದ ಹಿಂದೆಯಷ್ಟೇ ಇಮ್ಯಾನುಯೆಲ್ ಮ್ಯಾಕ್ರಾನ್ ಫ್ರಾನ್ಸ್ ನ ಅಧ್ಯಕ್ಷರಾಗಿ ಮರು ಆಯ್ಕೆಯಾಗಿದ್ದರು.