ಮಂಜೇಶ್ವರ : ರಾ.ಹೆದ್ದಾರಿ ಅಗಲೀಕರಣದ ಕಾಮಗಾರಿ ಅವೈಜ್ಞಾನಿಕವಾಗಿ ನಡೆಯುತ್ತಿರುವ ಬಗ್ಗೆ ವ್ಯಾಪಕವಾದ ಆಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲೇ ಸಂಸದರ ಭೇಟಿ ನಿರಾಶಾದಾಯಕವಾಗಿರುವುದಾಗಿಯೂ ಜನರ ಬೇಡಿಕೆಗಳನ್ನು ಸರಿಯಾಗಿ ಆಲಿಸದೆ ವ್ಯಾಪಾರಿ ನೇತಾರರೊಬರಲ್ಲಿ ಆಕ್ರೋಶದ ಮಾತುಗಳನ್ನಾಡಿರುವುದನ್ನು ಸ್ಥಳೀಯರು ಸಾಮಾಜಿಕ ಜಾಲ ತಾಣಗಳಲ್ಲಿ ಹರಿಯಲು ಬಿಟ್ಟಿದ್ದಾರೆ. ಈಗ ಈ ವೀಡಿಯೊಗಳು ಭಾರಿ ವೈರಲಾಗುತ್ತಿರುವ ಮಧ್ಯೆ ಗಡಿನಾಡ ಪ್ರದೇಶದ ಜನತೆ ಅವೈಜ್ಞಾನಿಕ ಕಾಮಗಾರಿಯ ವಿರುದ್ಧ ತಮ್ಮ ವಿರೋಧವನ್ನು ವ್ಯಕ್ತಪಡಿಸಲು ವಾಟ್ಸಾಪ್ ಗ್ರೂಪ್ ತಯಾರಿಸಿ ಭಾನುವಾರ ಉದ್ಯಾವರ ರಫಾ ಹಾಲ್ ನಲ್ಲಿ ಕ್ರಿಯಾ ಸಮಿತಿ ರೂಪೀಕರಣ ಸಭೆ ನಡೆಸಿದರು.
ತೂಮಿನಾಡಿನಿಂದ ಉದ್ಯಾವರ ತನಕ ಇದೀಗ ಭಾರಿ ಎತ್ತರದ ಅಡ್ಡ ಗೋಡೆಗಳಿಂದ ನಿರ್ಮಾಣವಾಗುತ್ತಿರುವ ಕಾಮಗಾರಿಗೆ ಕಾನೂನು ರೀತಿಯ ಹೋರಾಟದಲ್ಲಿ ತಡೆಯೊಡ್ಡುವ ಬಗ್ಗೆ ಚರ್ಚೆಗಳು ನಡೆದಿದೆ.
ರಾಷ್ಟ್ರೀಯ ಹೆದ್ದಾರಿಗೆ 27 ಮೀಟರ್ ಹಾಗೂ ಸರ್ವಿಸ್ ರಸ್ತೆ ಸೇರಿ 45 ಮೀಟರಿನೊಳಗೆ ರಸ್ತೆ ಮಾಡುವಂತೆ ಕೇರಳ ಸರ್ಕಾರ ಆದೇಶಿಸಿದ್ದರೂ ಅದೆಲ್ಲವನ್ನೂ ಮೀರಿ ಕೆಲವೊಂದು ಕಡೆಗಳಲ್ಲಿ 55 ಮೀಟರಿನಷ್ಟು ಸ್ಥಳಗಳನ್ನು ಅತಿಕ್ರಮಿಸಿರುವುದಾಗಿ ಸಭೆಯಲ್ಲಿ ಆರೋಪ ಕೇಳಿಬಂದಿದೆ. ಸಂಸದ ಹಾಗು ಶಾಸಕರ ಜೊತೆಗೆ ರಾ. ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಕೆಲವೊಂದು ಭರವಸೆ ಮಾತುಗಳನ್ನು ನೀಡಿದ್ದರೂ ಲಿಖಿತವಾದ ಭರವಸೆ ನೀಡದೆ ಕಾಮಗಾರಿ ಮುಂದುವರಿಸಬಾರದಾಗಿ ಅಭಿಪ್ರಾಯ ಬಂದಿದೆ. ವ್ಯಾಪಾರಿ ನೇತಾರರೊಬ್ಬರು ಭೇಟಿ ನೀಡಿದ ಸಂಸದರಲ್ಲಿ ಸಮಸ್ಯೆಗಳ ಬಗ್ಗೆ ವಿವರಿಸುತ್ತಿರುವಾಗ ನೀನು ಯಾಕೆ ಅಂದು ಪ್ರತಿಭಟಿಸಿಲ್ಲವೆಂಬ ಸಂಸದರ ಪ್ರತಿಕ್ರಿಯೆ ಸರಿ ಅಲ್ಲವೆಂಬ ಅಭಿಪ್ರಾಯಗಳು ವ್ಯಕ್ತವಾಗಿವೆ. ಜನರಿಗೆ ನಡೆದಾಡಲು ಪುಟ್ ಪಾತ್ ಅಗಲಗೊಳಿಸಬೇಕು, ತೂಮಿನಾಡು, ಕುಂಜತ್ತೂರು ಹಾಗೂ ಉದ್ಯಾವರಗಳಲ್ಲಿ ಅಂಡರ್ ಪಾಸ್ ನಿರ್ಮಿಸಬೇಕು ಎಂಬ ಬೇಡಿಕೆಗಳು ವ್ಯಕ್ತವಾಗಿದೆ. ಅಭಿವೃದ್ದಿಗಾಗಿ ಸರ್ವವನ್ನು ತ್ಯಾಗ ಮಾಡಿದ ಸ್ಥಳೀಯರನ್ನು ಕಡೆಗಣಿಸಿ ನಡೆಸುತ್ತಿರುವ ಕಾಮಗಾರಿಗೆ ವ್ಯಾಪಕವಾದ ವಿರೋಧ ವ್ಯಕ್ತವಾಗುತ್ತಿದೆ. ಭಾನುವಾರ ನಡೆಸಿದ ಕ್ರಿಯಾ ಸಮಿತಿ ರೂಪೀಕರಣ ಸಭೆಯಲ್ಲಿ ಹಲವು ರಾಜಕೀಯ, ಸಂಘಟನೆಗಳ ನೇತಾರರು ಹಾಗೂ ಸಾಮಾಜಿಕ ಕಾರ್ಯಕರ್ತರು ಪಾಲ್ಗೊಂಡರು.