ಮುಂಬೈ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹಚರ ಸಲೀಂ ಫ್ರೂಟ್ ರಾಷ್ಟ್ರೀಯ ತನಿಖಾ ಸಂಸ್ಥೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮೋಸ್ಟ್ ವಾಂಟೆಡ್ ದಾವೂದ್ ಇಬ್ರಾಹಿಂನ ಸಹಾಯಕ ಸಲೀಂ ಖುರೇಷಿ ಅಲಿಯಾಸ್ ಸಲೀಂ ಫ್ರೂಟ್ ನನ್ನು ವಶಕ್ಕೆ ಪಡೆದುಕೊಂಡಿದ್ದು, ದಕ್ಷಿಣ ಮುಂಬೈನಲ್ಲಿರುವ ಸಲೀಮ್ ಫ್ರೂಟ್ ನಿವಾಸದ ಮೇಲೆ ಇಂದು ಎನ್ಐಎ ದಾಳಿ ನಡೆಸಿತ್ತು.
ಕಪ್ಪುಹಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಮುಂಬೈನಲ್ಲಿರುವ ದಾವೂದ್ ಇಬ್ರಾಹಿಂ ಆಸ್ತಿಗಳ ಕೇರ್ ಟೇಕರ್ ಸಲೀಂ ಫ್ರೂಟ್ ಅವರಿಗೆ ಜಾರಿ ನಿರ್ದೇಶನಾಲಯ ಈ ಹಿಂದೆ ಎರಡು ಬಾರಿ ಸಮನ್ಸ್ ಜಾರಿ ಮಾಡಿತ್ತು.
ಸಲೀಂ ಅವರ ನಿವಾಸದಿಂದ ದಾವೂದ್ ಒಡೆತನದ ಬೇನಾಮಿ ಆಸ್ತಿಗೆ ಸಂಬಂಧಿಸಿದ ಕೆಲವು ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ದಾವೂದ್ ಸಹಚರರು ಮತ್ತು ಕೆಲವು ಹವಾಲಾ ಆಪರೇಟರ್‌ಗಳಿಗೆ ಸಂಬಂಧಿಸಿದಂತೆ ಮುಂಬೈನ ಹಲವು ಸ್ಥಳಗಳಲ್ಲಿ ಎನ್‌ಐಎ ದಾಳಿ ನಡೆಸುತ್ತಿದೆ.