ಅಮರಾವತಿ: ಹೊಸದಾಗಿ ನೇಮಕಗೊಂಡಿರುವ ಆಂಧ್ರಪ್ರದೇಶ ಗೃಹ ಸಚಿವೆ ತನೇತಿ ವನಿತಾ ಅವರು ರಾಜ್ಯದಲ್ಲಿ ಇತ್ತೀಚೆಗೆ ನಡೆದ ಅತ್ಯಾಚಾರ ಘಟನೆಗಳ ಕುರಿತು ತಮ್ಮ ಕಾಮೆಂಟ್‌ಗಳಿಗಾಗಿ ವಿವಾದಕ್ಕೆ ಒಳಗಾಗಿದ್ದಾರೆ.
ಮೇ 1 ರಂದು 25 ವರ್ಷದ ಗರ್ಭಿಣಿ ಮೇಲೆ ರೇಪಲ್ಲೆ ರೈಲು ನಿಲ್ದಾಣದಲ್ಲಿ ನಡೆದ ಸಾಮೂಹಿಕ ಅತ್ಯಾಚಾರವು ಉದ್ದೇಶ ಪೂರ್ವಕವಾಗಿರಲಿಲ್ಲ. ಅನಿರೀಕ್ಷಿತ ಸಂದರ್ಭಗಳಲ್ಲಿ ಅದು ಸಂಭವಿಸಿದೆ ಎಂದು ಅವರು ಹೇಳಿದ್ದಾರೆ. ಇದು ತೀವ್ರ ಟೀಕೆಗೆ ಗುರಿಯಾಗಿದೆ.
ಅತ್ಯಾಚಾರದ ಘಟನೆಗಳಿಗೆ ಅವರು ಮಾನಸಿಕ ಪರಿಸ್ಥಿತಿ ಮತ್ತು ಬಡತನವನ್ನು ದೂಷಿಸಿದ್ದಾರೆ. ಆರೋಪಿಗಳು ಅತ್ಯಾಚಾರ ಮಾಡುವ ಉದ್ದೇಶವನ್ನು ಹೊಂದಿಲ್ಲ ಎಂದು ಹೇಳಿದ್ದಾರೆ. ಪುರುಷರು ಕುಡಿದು ಬಂದು ಮಹಿಳೆಯ ಬಳಿ ಬೆಲೆಬಾಳುವ ವಸ್ತುಗಳನ್ನ ದೋಚುವ ಉದ್ದೇಶದಿಂದ ದಾಳಿ ನಡೆಸಿದ್ದರು. ಆದರೆ ಅನಿರೀಕ್ಷಿತ ರೀತಿಯಲ್ಲಿ ಅತ್ಯಾಚಾರ ಸಂಭವಿಸಿದೆ ಎಂದಿದ್ದಾರೆ.
ಸಾಕಷ್ಟು ರೈಲ್ವೇ ಪೋಲೀಸ್ ಪಡೆಗಳು ಲಭ್ಯವಾಗದಿರುವುದನ್ನು ದೂಷಿಸಲಾಗುವುದಿಲ್ಲ. ರೈಲ್ವೆ ನಿಲ್ದಾಣಗಳಲ್ಲಿ ಹೆಚ್ಚಿನ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು ಎಂದು ಅವರು ಹೇಳಿದರು.
ಈ ಹಿಂದೆ, ವೈಜಾಗ್‌ನಲ್ಲಿ ಅಪ್ರಾಪ್ತೆ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಸಂದರ್ಭದಲ್ಲಿ ಮಗುವಿನ ಸುರಕ್ಷತೆಯ ಜವಾಬ್ದಾರಿ ತಾಯಿಯಾಗಿರುತ್ತದೆ ಎಂದು ಅವರು ಹೇಳಿ ವಿವಾದಕ್ಕೀಡಾಗಿದ್ದರು.
ಪ್ರತಿಪಕ್ಷ ತೆಲುಗು ದೇಶಂ ಪಕ್ಷವು ಗೃಹ ಸಚಿವರ ವಿರುದ್ಧ ವಾಗ್ದಾಳಿ ನಡೆಸಿದ್ದು, ಅವರ ಹೇಳಿಕೆಗಳು ಬೇಜವಾಬ್ದಾರಿ ಎಂದು ಬಣ್ಣಿಸಿದೆ.
ಎರಡು ವಾರಗಳಲ್ಲಿ ಆಂಧ್ರ ಪ್ರದೇಶದ ರೈಲು ನಿಲ್ದಾಣಗಳಲ್ಲಿ ಎರಡು ಅತ್ಯಾಚಾರ ಘಟನೆಗಳು ನಡೆದಿವೆ. ಏಪ್ರಿಲ್ 16 ರಂದು ಗುರಜಾಲ ರೈಲು ನಿಲ್ದಾಣದಲ್ಲಿ ಮಹಾರಾಷ್ಟ್ರದ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ನಡೆದಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.