ದೇಶದಲ್ಲಿ ಕೋವಿಡ್-19 ಸೋಂಕಿನಿಂದ ಮೃತಪಡುವವರ ಸಂಖ್ಯೆ ದಿನೇ ದಿನೇ ಇಳಿಕೆಯಾಗುತ್ತಿದೆ. ದೇಶದಲ್ಲಿ ಕಳೆದ ನಾಲ್ಕು ವಾರಗಳಲ್ಲಿ ಸೋಂಕಿನ ಸಂಖ್ಯೆ ಹೆಚ್ಚುತ್ತಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 20 ಸಾವಿರ ಗಡಿ ದಾಟಿದೆ. ಆದರೆ ರವಿವಾರ ಮುಕ್ತಾಯವಾದ ಒಂದು ವಾರದ ಅವಧಿಯಲ್ಲಿ ಕೋವಿಡ್-19 ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 20 ಮಾತ್ರ.
ಇದು 2020ರ ಮಾರ್ಚ್ ಅಂದರೆ 26 ತಿಂಗಳಲ್ಲೇ ಕನಿಷ್ಠ ಸಂಖ್ಯೆಯಾಗಿದೆ. ಆಗ ದೇಶದಲ್ಲಿ ಕೇವಲ 100 ಪ್ರಕರಣಗಳು ಮಾತ್ರ ವರದಿಯಾಗಿದ್ದವು. ದೇಶದಲ್ಲಿ ಸತತ ನಾಲ್ಕನೇ ವಾರ ಕೋವಿಡ್-19 ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ. ಆದರೆ ಈ ವಾರ ಉಂಟಾಗಿರುವ ಏರಿಕೆ ಶೇಕಡ 3.5ರಷ್ಟು ಮಾತ್ರ.
ದೆಹಲಿ-ಎನ್‍ಸಿಆರ್ ಪ್ರದೇಶದಲ್ಲಿ ಸೋಂಕು ವ್ಯಾಪಕವಾಗುತ್ತಿದ್ದು, ಒಂದು ವಾರದ ಅವಧಿಯಲ್ಲಿ 23 ಸಾವಿರ ಹೊಸ ಪ್ರಕರಣಗಳು ವರದಿಯಾಗಿವೆ. ಇದು ಹಿಂದಿನ ವಾರ ದಾಖಲಾದ 22,300 ಪ್ರಕರಣಗಳಿಗೆ ಹೋಲಿಸಿದರೆ ಅಧಿಕ.
ಪ್ರಸಕ್ತ ಸೋಂಕು ಏರಿಕೆ ಪ್ರಮಾಣವನ್ನು ಗಮನಿಸಿದರೆ, ವಿವಿಧ ತಜ್ಞರು ಅಭಿಪ್ರಾಯಪಟ್ಟಂತೆ ಇದು ನಾಲ್ಕನೇ ಅಲೆ ಅಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಕೋವಿಡ್-19 ನಿರ್ಬಂಧಗಳನ್ನು ಸಡಿಲಿಸಿ, ಸಾಮಾಜಿಕ ಸಂಪರ್ಕ ಹೆಚ್ಚಿಸಿರುವುದರ ಪರಿಣಾಮ ಎನ್ನಲಾಗಿದೆ.
ದೇಶದಲ್ಲಿ ಹಿಂದಿನ ವಾರ 27-30 ಮಂದಿ ಸೋಂಕಿತರು ಮೃತಪಟ್ಟಿದ್ದು, ಈ ವಾರ ಸೋಂಕಿತರ ಸಾವಿನಸಂಖ್ಯೆ 20ಕ್ಕೆ ಇಳಿದಿದೆ. ಕಳೆದ ನಾಲ್ಕು ವಾರಗಳಲ್ಲಿ 69,222 ಹೊಸ ಪ್ರಕರಣಗಳು ದೇಶದಲ್ಲಿ ವರದಿಯಾಗಿದ್ದು, ಸಾವಿನ ಸಂಖ್ಯೆ 106. ಈ ಅವಧಿಯಲ್ಲಿ ಸಾವಿನ ಪ್ರಮಾಣ ಶೇಕಡ 0.15ರಷ್ಟಾಗಿದ್ದು, ದೇಶದ ಒಟ್ಟಾರೆ ಸಾವಿನ ಪ್ರಮಾಣವಾದ 1.22%ಗೆ ಹೋಲಿಸಿದರೆ ಇದು ಅತ್ಯಲ್ಪ.