ಜಮ್ಮು: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಲ್ಲಿ ಕಾಣಿಸಿಕೊಂಡ ಕಾಡ್ಗಿಚ್ಚು ಹಲವಾರು ನೆಲಬಾಂಬ್ ಸ್ಫೋಟಗೊಳ್ಳುವಂತೆ ಮಾಡಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಸೋಮವಾರ ನಿಯಂತ್ರಣ ರೇಖೆಯಾದ್ಯಂತ ಕಾಡಿನಲ್ಲಿ ಪ್ರಾರಂಭವಾದ ಬೆಂಕಿ ಮೆಂಧರ್ ಸೆಕ್ಟರ್‌ನ ಭಾರತದ ಭಾಗಕ್ಕೂ ವ್ಯಾಪಿಸಿದೆ ಎಂದು ಅವರು ಹೇಳಿದರು. ಅಕ್ರಮ ಒಳನುಸುಳುವಿಕೆ ವಿರೋಧಿ ಅಡಚಣೆ ವ್ಯವಸ್ಥೆಯ ಭಾಗವಾಗಿದ್ದ ಅರ್ಧ ಡಜನ್ ನೆಲೆಬಾಂಬ್ ಸ್ಫೋಟಕ್ಕೆ ಕಾಡ್ಗಿಚ್ಚು ಕಾರಣವಾಯಿತೆಂದು ಅಧಿಕಾರಿಗಳು ತಿಳಿಸಿದ್ದಾರೆ.
“ಕಳೆದ ಮೂರು ದಿನಗಳಿಂದ ಕಾಡ್ಗಿಚ್ಚು ಉರಿಯುತ್ತಿದೆ. ನಾವು ಸೇನೆಯೊಂದಿಗೆ ಬೆಂಕಿಯನ್ನು ನಂದಿಸುತ್ತಿದ್ದೇವೆ. ಬೆಂಕಿಯನ್ನು ಹತೋಟಿಗೆ ತರಲಾಗಿದೆ. ಆದರೆ ಇಂದು ಬೆಳಿಗ್ಗೆ ದರಂಶಾಲ್ ಬ್ಲಾಕ್‌ನಲ್ಲಿ ಪ್ರಾರಂಭವಾದ ಕಾಡ್ಗಿಚ್ಚು ಪ್ರಬಲವಾದ ಗಾಳಿಯಿಂದಾಗಿ ವೇಗವಾಗಿ ವ್ಯಾಪಿಸಿದೆ” ಎಂದು ಫಾರೆಸ್ಟರ್ ಕನಾರ್ ಹುಸೇನ್ ಶಾ ಹೇಳಿದರು.
ರಜೌರಿ ಜಿಲ್ಲೆಯಲ್ಲಿ, ಗಡಿ ಸಮೀಪದ ಸುಂದರಬಂಡಿ ಪ್ರದೇಶದಲ್ಲಿ ಮತ್ತೊಂದು ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಇದು ಗಂಭೀರ್, ನಿಕ್ಕಾ, ಪಂಜ್‌ಗ್ರೇ, ಬ್ರಾಹ್ಮಣ, ಮೊಘಲಾ ಸೇರಿದಂತೆ ಇತರ ಅರಣ್ಯ ಪ್ರದೇಶಗಳಿಗೆ ವ್ಯಾಪಿಸಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಕಲಕೋಟೆಯ ಕಾಳಾರ್, ರಂತಾಲ್, ಚಿಂಗಿ ಅರಣ್ಯಗಳಲ್ಲೂ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯು ಗಡಿಯುದ್ದಕ್ಕೂ ಬಂದಿತು ಮತ್ತು ಅಪ್ಪರ್ ಕಾಂಗ್ಡಿ ಮತ್ತು ಡೋಕ್ ಬನ್ಯಾದ್‌ನ ಎಲ್‌ಒಸಿ ಪ್ರದೇಶಗಳಿಗೂ ಹರಡಿತು. ಕಾಡ್ಗಿಚ್ಚು ಹತೋಟಿಗೆ ಬಂದಿದ್ದು, ಯಾವುದೇ ಮಾನವನ ನಷ್ಟವಿಲ್ಲದಂತಾಗಿದೆ ಎಂದು ಅವರು ಹೇಳಿದರು.
ಜಮ್ಮು ಜಿಲ್ಲೆಯ ಅಂತಾರಾಷ್ಟ್ರೀಯ ಗಡಿ (ಐಬಿ) ಉದ್ದಕ್ಕೂ ಇರುವ ಕೃಷಿ ಕ್ಷೇತ್ರಗಳಲ್ಲಿ ಮತ್ತೊಂದು ಭಾರಿ ಬೆಂಕಿ ಕಾಣಿಸಿಕೊಂಡಿದೆ. ಬಿಎಸ್‌ಎಫ್‌ನ ಬೆಲಿ ಅಜ್ಮತ್ ಬೋರರ್ ಔಟ್ ಪೋಸ್ಟ್ (ಬಿಒಪಿ) ಸಮೀಪವಿರುವ ಹಲವಾರು ಕಿಲೋಮೀಟರ್ ಪ್ರದೇಶಕ್ಕೆ ಬೆಂಕಿ ವ್ಯಾಪಿಸಿದ್ದು, ಅದನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ಹೇಳಿದರು.