ಬದಿಯಡ್ಕ: ಮುಳ್ಳೇರಿಯ ಜಿವಿಎಚ್‍ಎಸ್‍ಎಸ್ ಶಾಲೆಯ ಎನ್‍ಎಸ್‍ಎಸ್ ಘಟಕದ ವತಿಯಿಂದ ಭಾನುವಾರ ಕನ್ನೆಪ್ಪಾಡಿ ಆಶ್ರಯ ಆಶ್ರಮದ ಪರಿಸರವನ್ನು ಶುಚೀಕರಣಗೊಳಿಸಲಾಯಿತು.
ಬೆಳಗ್ಗೆ 10 ಗಂಟೆಯಿಂದ ವಿದ್ಯಾರ್ಥಿಗಳು ಆಶ್ರಮದ ಪರಿಸರದಲ್ಲಿ ಬೆಳೆದು ನಿಂತ ಕಾಡನ್ನು ಕಡಿದು, ಹುಲ್ಲನ್ನು ತೆಗೆಯುವ ಕಾರ್ಯದಲ್ಲಿ ತೊಡಗಿದ್ದರು. ಸಮಾಜಸೇವೆಯೆಂಬ ಧ್ಯೇಯದೊಂದಿಗೆ ಕಳೆದ ಕೆಲವು ವರ್ಷಗಳಲ್ಲಿಯೂ ಇದೇ ರೀತಿಯ ಸೇವೆಯನ್ನು ಮಾಡಲಾಗಿತ್ತು. ಮಧ್ಯಾಹ್ನ ಆಶ್ರಮವಾಸಿಗಳೊಂದಿಗೆ ಎನ್‍ಎಸ್‍ಎಸ್ ಘಟಕದ ಶೈಕ್ಷಣಿಕ ವರ್ಷದ ಕೊನೆಯದಿನದ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಅಧ್ಯಾಪಕರಾದ ಚಂದ್ರಶೇಖರ ಏತಡ್ಕ, ಶಶಿರಾಜ ನೀಲಂಗಳ, ಆಶ್ರಮ ಹಿತೈಶಿಗಳಾದ ಮಹೇಶ್ ವಳಕ್ಕುಂಜ, ಬಾಲಸುಬ್ರಹ್ಮಣ್ಯ ಮಲ್ಲಡ್ಕ, ಶ್ಯಾಮಲಾ ಹಾಗೂ ಇಂದಿರಾ ಜೊತೆಗಿದ್ದರು. ಎನ್‍ಎಸ್‍ಎಸ್ ಘಟಕದ ವತಿಯಿಂದ ಆಶ್ರಮಕ್ಕೆ ದೇಣಿಗೆಯಾಗಿ 10 ಕುರ್ಚಿ ಮತ್ತು ಊಟದ ಟೇಬಲ್ ನೀಡಲಾಯಿತು.