ನವದೆಹಲಿ: ಕೇರಳದಲ್ಲಿ ಮುಸ್ಲಿಮರಿಗೆ ಮೀಸಲಾಗಿರುವ ಹುದ್ದೆಗಳಿಗೆ ಬೇರೆ ರಾಜ್ಯಗಳ ಮುಸ್ಲಿಮರು ಅರ್ಹರಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ವಾಸವಿರುವ ರಾಜ್ಯದಲ್ಲಿ ಮೀಸಲಾತಿ ಪ್ರಮಾಣ ಪತ್ರದೊಂದಿಗೆ ಬೇರೆ ರಾಜ್ಯದಲ್ಲಿ ಮೀಸಲಾತಿ ಪಡೆಯುವಂತಿಲ್ಲ ಎಂಬ ಹೈಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ.
ಕರ್ನಾಟಕದವರಾದ ಬಿ. ಮೊಹಮ್ಮದ್ ಇಸ್ಮಾಯಿಲ್ ನೇಮಕವನ್ನು ರದ್ದುಗೊಳಿಸಿದ ಕೇರಳ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಪ್ರತಿ ರಾಜ್ಯದ ಸಂದರ್ಭಗಳನ್ನು ಆಧರಿಸಿ ಮೀಸಲಾತಿಯನ್ನು ನಿರ್ಧರಿಸಲಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಗಮನಸೆಳೆದಿದೆ. ನ್ಯಾಯಮೂರ್ತಿಗಳಾದ ಅಜಯ್ ರಸ್ತೋಗಿ ಮತ್ತು ಸಿ.ಟಿ.ರವಿಕುಮಾರ್ ಅವರಿದ್ದ ವಿಭಾಗೀಯ ಪೀಠ ಅರ್ಜಿಯ ವಿಚಾರಣೆ ನಡೆಸಿತು.
ಮೊಹಮ್ಮದ್ ಇಸ್ಮಾಯಿಲ್ ಕಣ್ಣೂರು ವಿಶ್ವವಿದ್ಯಾಲಯದ ಐಟಿ ವಿಭಾಗಕ್ಕೆ ಪ್ರವೇಶ ಪಡೆದಿದ್ದರು. ಆದರೆ, ದೂರಿನ ಹಿನ್ನೆಲೆಯಲ್ಲಿ ಹೈಕೋರ್ಟ್ ಪ್ರವೇಶವನ್ನು ರದ್ದುಗೊಳಿಸಿತ್ತು. 2018 ರ ಯುಜಿಸಿ ನಿಯಮಗಳ ಪ್ರಕಾರ ರಾಷ್ಟ್ರೀಯ ಆಧಾರದ ಮೇಲೆ ನಡೆಸಿದ ಸಂದರ್ಶನದ ಆಧಾರದ ಮೇಲೆ ಮೊಹಮ್ಮದ್ ಇಸ್ಮಾಯಿಲ್ ಪ್ರವೇಶ ಪಡೆದಿದ್ದಾರೆ ಎಂದು ವಿಶ್ವವಿದ್ಯಾಲಯ ಹೇಳಿಕೊಂಡಿದೆ.
ಕೇರಳ ಮತ್ತು ಕರ್ನಾಟಕದಲ್ಲಿ ಮುಸ್ಲಿಂ ಸಮುದಾಯ ಹಿಂದುಳಿದ ಸಮುದಾಯ ಎಂದು ಘೋಷಿಸಲಾಗಿದೆ. ಹಾಗಾಗಿ ಹಿಂದುಳಿದ ವರ್ಗಗಳಿಗೆ ಮೀಸಲಾದ ಹುದ್ದೆಗೆ ಕರ್ನಾಟಕದವರೇ ಆದ ಮಹಮ್ಮದ್ ಇಸ್ಮಾಯಿಲ್ ಅವರಿಗೆ ಪ್ರವೇಶ ನೀಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ವಿಶ್ವವಿದ್ಯಾನಿಲಯ ಸುಪ್ರೀಂ ಕೋರ್ಟ್ ನಲ್ಲಿ ವಾದ ಮಂಡಿಸಿತು.
ಮೊಹಮ್ಮದ್ ಇಸ್ಮಾಯಿಲ್ ಅವರ ಪ್ರವೇಶವನ್ನು ಪ್ರಶ್ನಿಸಿ ಪಟ್ಟಿಯಲ್ಲಿ ಎರಡನೇ ಅತ್ಯುನ್ನತ ಶ್ರೇಣಿಯ ಅಭ್ಯರ್ಥಿ ಅಬ್ದುಲ್ ಹಲೀಮ್ ಅವರು ಸಲ್ಲಿಸಿದ ಮೇಲ್ಮನವಿಯ ಮೇಲೆ ಹೈಕೋರ್ಟ್ ಈ ತೀರ್ಪು ನೀಡಿದೆ. ಒಂದು ರಾಜ್ಯದಲ್ಲಿ ಎಸ್‍ಸಿ, ಎಸ್‍ಟಿ ಮತ್ತು ಒಬಿಸಿ ವರ್ಗಕ್ಕೆ ಸೇರಿದವರು ಎಂದು ಪ್ರಮಾಣೀಕರಿಸಿದ ವ್ಯಕ್ತಿಯು ಮತ್ತೊಂದು ರಾಜ್ಯದಲ್ಲಿ ಈ ಪ್ರಮಾಣಪತ್ರದ ಆಧಾರದ ಮೇಲೆ ಪ್ರಯೋಜನಗಳನ್ನು ಪಡೆಯಲು ಸಾಧ್ಯವಿಲ್ಲ ಎಂದು ಅಬ್ದುಲ್ ಹಲೀಮ್ ಪರ ವಕೀಲರು ವಾದಿಸಿದರು.