ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಸೋಮವಾರ ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಐಪಿಸಿ ಸೆಕ್ಷನ್ 109 ಮತ್ತು ಸೆಕ್ಷನ್ 13(2)ರ ಅಡಿ ಸತ್ಯೇಂದ್ರ ಜೈನ್ ಮತ್ತು ಇತರರ ವಿರುದ್ಧ ಕೇಂದ್ರೀಯ ತನಿಖಾ ಸಂಸ್ಥೆ(ಸಿಬಿಐ) ದಾಖಲಿಸಿದ ಎಫ್‌ಐಆರ್ ಆಧಾರದ ಮೇಲೆ ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆ ನಡೆಸುತ್ತಿದೆ.
ಕಳೆದ ತಿಂಗಳು ಜೈನ್ ಕುಟುಂಬದ ಒಡೆತನದಲ್ಲಿರುವ 4.81 ಕೋಟಿ ರೂಪಾಯಿ ಮೌಲ್ಯದ ಐದು ಸಂಸ್ಥೆಗಳಿಗೆ ಸೇರಿದ ಸ್ಥಿರಾಸ್ತಿಯನ್ನು ಇಡಿ ಜಪ್ತಿ ಮಾಡಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ 2018 ರಲ್ಲಿ ಆಮ್ ಆದ್ಮಿ ಪಕ್ಷದ(ಎಎಪಿ) ನಾಯಕನನ್ನು ವಿಚಾರಣೆಗೆ ಒಳಪಡಿಸಿತ್ತು.
ಜೈನ್ ಬಂಧನವು ಕೇಂದ್ರಾಡಳಿತ ಪ್ರದೇಶವಾದ ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಕೇಂದ್ರ ಸರ್ಕಾರದ ನಡುವೆ ಹೊಸ ಯುದ್ಧವನ್ನು ಹುಟ್ಟುಹಾಕುವ ಸಾಧ್ಯತೆಯಿದೆ.
ಜೈನ್ ಅವರು ಎಎಪಿ ಉಸ್ತುವಾರಿಯಾಗಿರುವ ಹಿಮಾಚಲ ಪ್ರದೇಶದಲ್ಲಿ ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಂಧಿಸಲಾಗಿದೆ ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಟ್ವೀಟ್ ಮಾಡಿದ್ದಾರೆ.
”ಸತ್ಯೇಂದ್ರ ಜೈನ್ ವಿರುದ್ಧ ಎಂಟು ವರ್ಷಗಳಿಂದ ನಕಲಿ ಕೇಸ್ ನಡೆಸಲಾಗುತ್ತಿದೆ. ಇದುವರೆಗೆ ಇಡಿ (ಜಾರಿ ನಿರ್ದೇಶನಾಲಯ) ಹಲವು ಬಾರಿ ಕರೆ ಮಾಡಿದೆ. ಈ ನಡುವೆ ಏನೂ ಸಿಗದ ಕಾರಣ ಇಡಿ ಹಲವು ವರ್ಷಗಳಿಂದ ಕರೆ ಮಾಡುವುದನ್ನು ನಿಲ್ಲಿಸಿದೆ. ಹಿಮಾಚಲದ ಚುನಾವಣಾ ಉಸ್ತುವಾರಿ ಸತ್ಯೇಂದ್ರ ಜೈನ್ ವಿರುದ್ಧ ಆಗ ಮತ್ತೆ ತನಿಖೆ ಆರಂಭಿಸಲಾಗಿದೆ ಎಂದು ಸಿಸೋಡಿಯಾ ಟ್ವೀಟ್ ಮಾಡಿದ್ದಾರೆ.
“ಬಿಜೆಪಿ ಹಿಮಾಚಲದಲ್ಲಿ ಹೀನಾಯವಾಗಿ ಸೋಲುತ್ತಿದೆ. ಅದಕ್ಕಾಗಿಯೇ ಸತ್ಯೇಂದ್ರ ಜೈನ್ ಅವರನ್ನು ಹಿಮಾಚಲಕ್ಕೆ ಹೋಗದಂತೆ ಇಂದು ಬಂಧಿಸಲಾಗಿದೆ. ಪ್ರಕರಣ ಸಂಪೂರ್ಣ ನಕಲಿಯಾಗಿದ್ದು ಕೆಲವೇ ದಿನಗಳಲ್ಲಿ ಅವರನ್ನು ಬಿಡುಗಡೆ ಮಾಡಲಾಗುವುದು” ಎಂದು ಉಪಮುಖ್ಯಮಂತ್ರಿ ಹೇಳಿದರು.