ಶ್ರೀನಗರ: ಶ್ರೀನಗರದ ಹೊರವಲಯದ ಸೌರಾದಲ್ಲಿ ತಮ್ಮ ಮನೆಯ ಹೊರಗಿದ್ದ ಪೊಲೀಸ್ ಪೇದೆಯೊಬ್ಬರ ಮೇಲೆ ಉಗ್ರರು ಮನಬಂದಂತೆ ಗುಂಡು ಹಾರಿಸಿದ್ದು, ಗುಂಡಿನ ದಾಳಿಯಲ್ಲಿ ಪೊಲೀಸ್ ಸಿಬ್ಬಂದಿ ಮೃತಪಟ್ಟಿದ್ದಾರೆ ಮತ್ತು ಅವರ ಏಳು ವರ್ಷದ ಮಗಳು ಸಹ ಗಾಯಗೊಂಡಿದ್ದಾರೆ ಎಂದು ಮಂಗಳವಾರ ಅಧಿಕಾರಿಗಳು ತಿಳಿಸಿದ್ದಾರೆ.
ಕಾಶ್ಮೀರದಲ್ಲಿ ಈ ತಿಂಗಳು ಉಗ್ರರಿಂದ ಹತ್ಯೆಗೀಡಾದ ಮೂರನೇ ಪೊಲೀಸ್ ಪೇದೆಯಾಗಿದ್ದಾರೆ. ಕಾನ್ಸ್‌ಟೇಬಲ್ ಸೈಫುಲ್ಲಾ ಖಾದ್ರಿ ಅವರು ಇಂದು ತಮ್ಮ ಮಗಳನ್ನು ಟ್ಯೂಷನ್‌ಗೆ ಬಿಡಲು ಮನೆಯಿಂದ ಹೊರಗೆ ಬರುತ್ತಿದ್ದಂತೆ ಉಗ್ರರು ದಾಳಿ ನಡೆಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಶ್ರೀನಗರ ಜಿಲ್ಲೆಯ ಅಂಚಾರ್ ಪ್ರದೇಶದ ಗನೈ ಮೊಹಲ್ಲಾದಲ್ಲಿರುವ ಅವರ ಮನೆಯ ಹೊರಗೆ ಕಾನ್ಸ್‌ಟೇಬಲ್ ಖಾದ್ರಿ ಅವರ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಗುವಿನ ಬಲಗೈಗೆ ಗುಂಡು ತಗುಲಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
ಖಾದ್ರಿ ಹತ್ಯೆಗೆ ತೀವ್ರ ಸಂತಾಪ ಸೂಚಿಸಿದ ಪೊಲೀಸ್ ಮಹಾ ನಿರ್ದೇಶಕ(ಕಾಶ್ಮೀರ ಶ್ರೇಣಿ) ವಿಜಯ್ ಕುಮಾರ್ ಅವರು, ಅಪರಾಧಿಗಳನ್ನು ಹಿಡಿಯಲು ಪಕ್ಕದ ಪ್ರದೇಶಗಳಿಗೆ ಪೊಲೀಸ್ ತಂಡಗಳನ್ನು ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.