ನವದೆಹಲಿ: ಜ್ಞಾನವಾಪಿ ಮಸೀದಿ ವಿವಾದಕ್ಕೆ ಸಂಬಂಧಿಸಿದ ವಿಚಾರಣೆಯಲ್ಲಿ ಮಧ್ಯಪ್ರವೇಶಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಮತ್ತೊಂದು ಅರ್ಜಿಯನ್ನು ಸಲ್ಲಿಸಲಾಗಿದೆ.
ಕಾನೂನುಬದ್ಧವಾಗಿ ಪಡೆದ ಭೂಮಿಯಲ್ಲಿ ನಿರ್ಮಿಸದಿದ್ದರೆ ಯಾವುದೇ ತುಂಡು ಭೂಮಿಯನ್ನು ಮಸೀದಿಗೆ ಸಂಬಂಧಿಸಿದ ಭೂಮಿ ಎಂದು ಹೇಳಲು ಮುಸ್ಲಿಂರಿಗೆ ಯಾವುದೇ ಹಕ್ಕಿರುವುದಿಲ್ಲ ಎಂದು ಅದರಲ್ಲಿ ಹೇಳಲಾಗಿದೆ. ಯಾವುದೇ ವ್ಯಕ್ತಿ ಅಕ್ರಮವಾಗಿ ಆಸ್ತಿ ಪಡೆದುಕೊಂಡು ನಮಾಜ್ ಮಾಡಿದರೂ ದೇವರಿರುವ ಆಸ್ತಿ ದೇವರ ಆಸ್ತಿಯಾಗಿ ಮುಂದುವರಿಯುತ್ತದೆ ಎಂದು ಅರ್ಜಿದಾರರು ತಿಳಿಸಿದ್ದಾರೆ.
ವ್ಯಕ್ತಿಯ ವೈಯಕ್ತಿಕ ಕಾನೂನಿಗೆ ಅನುಗುಣವಾಗಿ ನಿರ್ಮಿಸಲಾದ ಅಥವಾ ನಿರ್ಮಿಸಿದ ಸ್ಥಳಗಳನ್ನು ಮಾತ್ರ ರಕ್ಷಿಸಬಹುದು ಆದರೆ, ವೈಯಕ್ತಿಕ ಕಾನೂನನ್ನು ಅವಹೇಳನ ಮಾಡುವುದನ್ನು 'ಆರಾಧನೆಯ ಸ್ಥಳ' ಎಂದು ಕರೆಯಲಾಗುವುದಿಲ್ಲ ಎಂದು ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ವಕೀಲ ಅಶ್ವನಿ ಕುಮಾರ್ ದುಬೆ ಅವರ ಮೂಲಕ ಸಲ್ಲಿಸಿದ ಅರ್ಜಿಯಲ್ಲಿ ಹೇಳಿದ್ದಾರೆ.
ಇಸ್ಲಾಂ ಧರ್ಮದ ತತ್ವಗಳ ಪ್ರಕಾರ ನಿರ್ಮಿಸಲಾದ ಕಟ್ಟಡಗಳಿಗೆ ಮಾತ್ರ ಮಸೀದಿಯ ಸ್ಥಾನಮಾನವನ್ನು ನೀಡಬಹುದು ಮತ್ತು ಇಸ್ಲಾಮಿಕ್ ಕಾನೂನಿನಲ್ಲಿರುವ ನಿಬಂಧನೆಗಳಿಗೆ ವಿರುದ್ಧವಾಗಿ ನಿರ್ಮಿಸಲಾದ ಮಸೀದಿಗಳನ್ನು ಮಸೀದಿ ಎಂದು ಕರೆಯಲಾಗುವುದಿಲ್ಲ ಎಂದು ಅರ್ಜಿಯಲ್ಲಿ ಪ್ರತಿಪಾದಿಸಲಾಗಿದೆ.
ಜ್ಞಾನವಾಪಿ ಮಸೀದಿ ಕುರಿತು ಹಿಂದೂ ಭಕ್ತರು ದಾಖಲಿಸಿದ ಸಿವಿಲ್ ಮೊಕದ್ದಮೆಯನ್ನು ಸುಪ್ರೀಂಕೋರ್ಟ್ ಮೇ 20 ರಂದು ಸಿವಿಲ್ ನ್ಯಾಯಾಧೀಶರಿಂದ ಜಿಲ್ಲಾ ನ್ಯಾಯಾಧೀಶರಿಗೆ ವರ್ಗಾಯಿಸಿತ್ತು. ಇದೊಂದು ಸೂಕ್ಷ್ಮ ವಿಚಾರವಾಗಿರುವುದರಿಂದ ಹಿರಿಯ ನ್ಯಾಯಾಂಗ ಅಧಿಕಾರಿಗಳು 25-30 ವರ್ಷ ಅನುಭವ ಹೊಂದಿರುವುದರಿಂದ ಅವರೇ ಈ ಕೇಸ್ ನಿರ್ವಹಿಸುವುದು ಸೂಕ್ತ ಎಂದು ಹೇಳಿತ್ತು.