ಆಲಪ್ಪುಳ: ಧಿಕ್ಕಾರದ ಘೋಷಣೆಗಳನ್ನು ಕೂಗಿದ ಮಗುವನ್ನು ಗುರುತಿಸಿದರೂ ಪೋಲೀಸರಿಗೆ ಆ ಬಾಲಕನನ್ನಾಗಲಿ, ಪೋಷಕರನ್ನಾಗಲಿ ಈವರೆಗೆ ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಘಟನೆಗೆ ಸಂಬಂಧಿಸಿ ಪೋಲೀಸರು ಬಂಧಿಸುವ ಭೀತಿಯಿಂದ ಕುಟುಂಬ ತಲೆಮರೆಸಿಕೊಂಡಿದ್ದು, ಇನ್ನೂ ಅವರಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೋಲೀಸರು ತಿಳಿಸಿದ್ದಾರೆ.
ಮಗು ತೋಪುಂಪಾಡಿ ಮೂಲದವನು ಎಂದು ತಿಳಿದ ನಂತರ ಆಲಪ್ಪುಳದ ಪೋಲೀಸ್ ತಂಡವು ಪೋೀಷಕರನ್ನು ವಶಕ್ಕೆ ತೆಗೆದುಕೊಳ್ಳಲು ಮನೆಗೆ ತೆರಳಿತ್ತು. ಆದರೆ ಮನೆ ಮುಚ್ಚಿತ್ತು. ದೂರವಾಣಿ ಸೇರಿದಂತೆ ಅವರನ್ನು ಸಂಪರ್ಕಿಸಲು ಯತ್ನಿಸಿದರೂ ಫಲಕಾರಿಯಾಗಲಿಲ್ಲ. ಕುಟುಂಬ ಎಲ್ಲಿದೆ ಎಂಬುದೇ ಗೊತ್ತಿಲ್ಲ ಎಂದು ನೆರೆಹೊರೆಯವರು ಕೂಡ ಹೇಳುತ್ತಾರೆ. ಘಟನೆ ವಿವಾದವಾದ ನಂತರ ಕಾನೂನು ಕ್ರಮದ ಭಯದಿಂದ ಕುಟುಂಬ ತಲೆಮರೆಸಿಕೊಂಡಿದೆ ಎಂದು ಪೋಲೀಸರು ತಿಳಿಸಿದ್ದಾರೆ. ಮಗುವಿನ ಗುರುತು ಪತ್ತೆಯಾದರೆ ಪಾಲಕರ ವಿರುದ್ಧವೂ ಬಂಧನ ಸೇರಿದಂತೆ ಕ್ರಮ ಕೈಗೊಳ್ಳುವುದಾಗಿ ಪೋಲೀಸರು ತಿಳಿಸಿದ್ದರು.
ಬಾಲಕನನ್ನು ಆತನ ತಂದೆಯೇ ಪಾಪ್ಯುಲರ್ ಫ್ರಂಟ್ ರ್ಯಾಲಿಗೆ ಕರೆತಂದರು ಎಂದು ತಿಳಿದುಬಂದಿದೆ. ಅವರು ಪಾಪ್ಯುಲರ್ ಫ್ರಂಟ್‍ನ ಸಕ್ರಿಯ ಸದಸ್ಯರಾಗಿದ್ದಾರೆ. ಪೌರತ್ವ ಕಾನೂನು ಸಂಬಂಧಿ ಈ ಹಿಂದಿನ ಪ್ರತಿಭಟನೆಯಲ್ಲೂ ಇದೇ ಬಾಲಕ ಕಾಣಿಸಿಕೊಂಡು ಉದ್ರೇಕಕಾರಿ ಘೋಷಣೆ ಕೂಗಿದ್ದ ಎಂಬ ಬಗೆಗೂ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆ ನಡೆಯುತ್ತಿದೆ. ಮಗು ಹಾಗೂ ಆತನ ಪೋಷಕರಿಗಾಗಿ ಜಿಲ್ಲೆಯಾದ್ಯಂತ ಪೋಲೀಸ್ ತನಿಖೆ ಮುಂದುವರಿದಿದೆ.