ಬದಿಯಡ್ಕ: ದೇವಸ್ಥಾನಗಳ ಜೀರ್ಣೋದ್ಧಾರ ಕಾರ್ಯಗಳು ನಮ್ಮ ಕರ್ತವ್ಯ ಎಂದು ತಿಳಿದು ಮಾನವನು ಎಚ್ಚೆತ್ತುಕೊಂಡರೆ ನೆನೆದ ಎಲ್ಲ ಕಾರ್ಯಗಳು ನಿರ್ವಿಘ್ನವಾಗಿ ನಡೆಯುತ್ತದೆ ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳು ನುಡಿದರು.
ನೀರ್ಚಾಲು ಸಮೀಪದ ಮಾನ್ಯ ಕಾರ್ಮಾರು ಶ್ರೀ ಮಹಾವಿಷ್ಣು ಕ್ಷೇತ್ರದಲ್ಲಿ ಭಾನುವಾರ ಜರಗಿದ ಸಭೆಯಲ್ಲಿ ಜೀರ್ಣೋದ್ಧಾರ ನಿಧಿಗೆ ಚಾಲನೆಯನ್ನು ನೀಡಿ ಅವರು ಆಶೀರ್ವಚನವನ್ನು ನೀಡಿದರು.
ಒಂದು ಕೆಲಸವು ಮುಂದುವರಿಯಬೇಕು ಎಂದಾದರೆ ಅದಕ್ಕೆ ನಾವು ಮನಸ್ಸು ಮಾಡಬೇಕು. ಎಲ್ಲರೂ ಒಗ್ಗಟ್ಟಿನಿಂದ ಜೀರ್ಣೋದ್ಧಾರ ಕಾರ್ಯಕ್ಕಿಳಿದಾಗ ದೇವರ ಅನುಗ್ರಹ ಸದಾ ಲಭಿಸುತ್ತದೆ. ನಿರೀಕ್ಷೆಗಿಂತ ಹೆಚ್ಚಿನ ಜನರು ಇಲ್ಲಿನ ಜೀರ್ಣೋದ್ಧಾರ ಕಾರ್ಯಗಳಿಗೆ ಸಹಕರಿಸಲಿದ್ದಾರೆ. ಅದಕ್ಕಿರುವ ಎಲ್ಲಾ ಸಂಪತ್ತುಗಳು ಕೈಗೂಡಲಿದೆ ಎಂದರು.
ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಮಾತನಾಡಿ ನಮ್ಮ ಸಂಕಲ್ಪಕ್ಕೆ ಪೂರಕವಾಗಿ ದೇವರ ಅನುಗ್ರಹವಿರುತ್ತದೆ. ಎಲ್ಲರೂ ಭಕ್ತಿಭಾವಗಳಿಂದ ಒಂದುಗೂಡಿದಾಗ ಅದಕ್ಕಿರುವ ಫಲ ಸಿಗುತ್ತದೆ ಎಂದರು. ಆಡಳಿತ ಮೊಕ್ತೇಸರ ನರಸಿಂಹ ಭಟ್ ಕಾರ್ಮಾರು ಅಧ್ಯಕ್ಷತೆ ವಹಿಸಿದ್ದರು. ಶ್ರೀ ಕ್ಷೇತ್ರದ ತಂತ್ರಿ ಬ್ರಹ್ಮಶ್ರೀ ಗಣೇಶ ತಂತ್ರಿ ದೇಲಂಪಾಡಿ, ಬ್ರಹ್ಮಶ್ರೀ ಗಣಾರಾಜ ತಂತ್ರಿ ಕೊಲ್ಲಂಗಾನ, ಬಿ ವಸಂತ ಪೈ ಬದಿಯಡ್ಕ, ಗೋಪಾಲಕೃಷ್ಣ ಪೈ ಬದಿಯಡ್ಕ, ಕೆ.ಎನ್.ವೆಂಕಟ್ರಮಣ ಹೊಳ್ಳ, ಮಾನ ಮಾಸ್ತರ್ ಕಾರ್ಮಾರು, ಶ್ರೀಕೃಷ್ಣ ಭಟ್ ಪುದುಕೋಳಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ದಿನೇಶ್ ಕೊಕ್ಕಡ ಶುಭಾಶಂಸನೆÀಗೈದರು. ಶ್ರೀಕೃಷ್ಣ ಭಟ್ ಪುದುಕೋಳಿ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ಮಹೇಶ್ ವಳಕ್ಕುಂಜ ವಂದಿಸಿದರು. ಸುಂದರ ಶೆಟ್ಟಿ ಕೊಲ್ಲಂಗಾನ ಕಾರ್ಯಕ್ರಮ ನಿರೂಪಿಸಿದರು.
ನೂತನ ಜೀರ್ಣೋದ್ಧಾರ ಸಮಿತಿಗೆ ಎಡನೀರು ಶ್ರೀಗಳು ಗೌರವಾಧ್ಯಕ್ಷರಾಗಿ, ಸರ್ವರಕ್ಷಾಧಿಕಾರಿಗಳಾಗಿ ಕ್ಷೇತ್ರ ತಂತ್ರಿಗಳಾದ ವೇದಮೂರ್ತಿ ಬ್ರಹ್ಮಶ್ರೀ ಗಣೇಶ ತಂತ್ರಿ ದೇಲಂಪಾಡಿ, ಗೌರವ ಸಲಹೆಗಾರರಾಗಿ ಬಿ.ವಸಂತ ಪೈ ಬದಿಯಡ್ಕ, ಅಧ್ಯಕ್ಷರಾಗಿ ಜ್ಯೋತಿಷಿ ಕೃಷ್ಣಮೂರ್ತಿ ಪುದುಕೋಳಿ, ಪ್ರಧಾನ ಕಾರ್ಯದರ್ಶಿಯಾಗಿ ಮಹೇಶ್ ವಳಕ್ಕುಂಜ, ಕೋಶಾಧಿಕಾರಿಯಾಗಿ ನಾರಾಯಣ ಭಟ್ ಕಲ್ಲಕಟ್ಟ, ಕಾರ್ಯಾಧ್ಯಕ್ಷರಾಗಿ ರಾಮ ಕೆ. ಕಾರ್ಮಾರು ಹಾಗೂ ಇತರ ಪದಾಧಿಕಾರಿಗಳನ್ನೊಳಗೊಂಡ ಸಮಿತಿಯನ್ನು ರೂಪೀಕರಿಸಲಾಯಿತು. ¸ಭಾಕಾರ್ಯಕ್ರಮಕ್ಕೆ ಮೊದಲು ಜೋಡು ಸತ್ಯನಾರಾಯಣ ಪೂಜೆ, ಎಡನೀರು ಶ್ರೀಗಳಿಗೆ ಪಾದಪೂಜೆ ನೆರವೇರಿಸಲಾಯಿತು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ಭೋಜನ ಜರಗಿತು.