ಭುವನೇಶ್ವರ: ಅಂಡಮಾನ್ ಸಮುದ್ರದ ದಕ್ಷಿಣ ಭಾಗದಲ್ಲಿ ಕಡಿಮೆ ಒತ್ತಡ ತೀವ್ರತೆಯ ಪ್ರದೇಶಗಳು ಏರ್ಪಟ್ಟಿದ್ದು ಆಂಧ್ರ ಪ್ರದೇಶ-ಒಡಿಶಾ ತೀರದಲ್ಲಿ ಮುಂದಿನ ವಾರ ಆರಂಭದಲ್ಲಿ ಚಂಡಮಾರುತ ಬಿರುಗಾಳಿ ತೀವ್ರತೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ದಕ್ಷಿಣ ಅಂಡಮಾನ್ ಸಮುದ್ರ ಮತ್ತು ಪಕ್ಕದ ಆಗ್ನೇಯ ಬಂಗಾಳ ಕೊಲ್ಲಿಯಲ್ಲಿನ ಹವಾಮಾನ ವ್ಯವಸ್ಥೆಯು ವಾಯುವ್ಯ ದಿಕ್ಕಿನಲ್ಲಿ ಚಲಿಸುವ ಸಾಧ್ಯತೆಯಿದೆ. ಇಂದು ವಾಯುಭಾರ ಕುಸಿತವಾಗಿ ಬಲಗೊಳ್ಳುವ ಸಾಧ್ಯತೆಯಿದೆ, ಇದರಿಂದ ನಾಳೆ ಸಾಯಂಕಾಲ ಹೊತ್ತಿಗೆ ಚಂಡಮಾರುತ ತೀವ್ರವಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ತೀವ್ರ ಬಿರುಗಾಳಿ ಚಂಡಮಾರುತದ ಸಾಧ್ಯತೆಯ ದೃಷ್ಟಿಯಿಂದ ಮುಂದಿನ ವಾರ ಮಂಗಳವಾರ ಮತ್ತು ಶುಕ್ರವಾರದ ನಡುವೆ ಗಂಗಾನದಿ ಪಶ್ಚಿಮ ಬಂಗಾಳದ ಜಿಲ್ಲೆಗಳಲ್ಲಿ ಗುಡುಗು ಮತ್ತು ಭಾರೀ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಹೀಗಾಗಿ ವಿಪತ್ತು ಪ್ರತಿಕ್ರಿಯೆ ಮತ್ತು ಅಗ್ನಿಶಾಮಕ ಸೇವೆಗಳ ತಂಡಗಳನ್ನು ಕಟ್ಟೆಚ್ಚರವಾಗಿ ಇರಿಸಲಾಗಿದೆ ಎಂದು ಒಡಿಶಾ ಸರ್ಕಾರ ಹೇಳಿದೆ. ಒಡಿಶಾ ತೀರದಲ್ಲಿ ಕಳೆದ ಮೂರು ಬೇಸಿಗೆಯಲ್ಲಿ ಚಂಡಮಾರುತ ಬೀಸಿದ್ದವು. ಕಳೆದ ವರ್ಷ 2021 ರಲ್ಲಿ 'ಯಾಸ್', 2020 ರಲ್ಲಿ 'ಅಂಫಾನ್' ಮತ್ತು 2019 ರಲ್ಲಿ 'ಫಾನಿ' ಚಂಡಮಾರುತ ಬೀಸಿದ್ದವು.
ಕಡಿಮೆ ಒತ್ತಡದ ಪ್ರದೇಶವು ವಾಯುವ್ಯಕ್ಕೆ ಚಲಿಸುವ ಸಾಧ್ಯತೆಯಿದೆ. ಆಗ್ನೇಯ ಬಂಗಾಳ ಕೊಲ್ಲಿಯ ಮೇಲೆ ಕುಸಿತಕ್ಕೆ ಒಳಗಾಗಿ ಪೂರ್ವ-ಮಧ್ಯ ಬಂಗಾಳಕೊಲ್ಲಿಯಲ್ಲಿ ಚಂಡಮಾರುತವಾಗಿ ಬದಲಾಗುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮಹಾನಿರ್ದೇಶಕ ಮೃತುಂಜಯ್ ಮೊಹಾಪಾತ್ರ ಹೇಳಿದ್ದಾರೆ.
ಚಂಡಮಾರುತ ಮೇ 10ರಂದು ಕರಾವಳಿ ತಲುಪುವ ಸಾಧ್ಯತೆ ಇದೆ ಎಂದು ಹೇಳಿದರು.
ನಾವು ಎನ್‌ಡಿಆರ್‌ಎಫ್‌ನ 17 ತಂಡಗಳು (ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ), ಒಡಿಆರ್‌ಎಫ್‌ನ 20 ತಂಡಗಳು (ಒಡಿಶಾ ಡಿಸಾಸ್ಟರ್ ರ್ಯಾಪಿಡ್ ಆಕ್ಷನ್ ಫೋರ್ಸ್) ಮತ್ತು ಅಗ್ನಿಶಾಮಕ ಇಲಾಖೆಯ ಸಿಬ್ಬಂದಿಯ 175 ತಂಡಗಳನ್ನು ಸಹಾಯಕ್ಕೆ ಕೇಳಿದ್ದೇವೆ. ಯಾವುದೇ ತುರ್ತು ಪರಿಸ್ಥಿತಿಗಾಗಿ ಇನ್ನೂ 10 ತಂಡಗಳನ್ನು ಕಾಯ್ದಿರಿಸುವಂತೆ NDRF ಅಧಿಕಾರಿಗಳಿಗೆ ವಿನಂತಿಸಲಾಗಿದೆ ಎಂದು ಒಡಿಶಾ ವಿಶೇಷ ಪರಿಹಾರ ಆಯುಕ್ತ (ಎಸ್‌ಆರ್‌ಸಿ) ಪಿ ಕೆ ಜೆನಾ ಹೇಳಿದ್ದಾರೆ.