ನವದೆಹಲಿ: ಮುಂದಿನ ಚುನಾವಣೆಗಳನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಕಾಂಗ್ರೆಸ್ಗೆ ಪಕ್ಷದ ಉಪಸಮಿತಿಯಿಂದ ಶಿಫಾರಸುಗಳನ್ನು ನೀಡಲಾಗಿದ್ದು, ಆ ಪ್ರಕಾರವೇ ಟಿಕೆಟ್ ಕೊಟ್ಟರೆ ಯುವ ನಾಯಕರನ್ನು ಪಕ್ಷದತ್ತ ಸೆಳೆಯಬಹುದು ಎಂಬ ಅಭಿಪ್ರಾಯವೊಂದು ವ್ಯಕ್ತವಾಗಿದೆ.
ಪಕ್ಷದ ನಾಯಕಿ ಸೋನಿಯಾ ಗಾಂಧಿ ಅವರನ್ನು ಭೇಟಿಯಾದ ಕಾಂಗ್ರೆಸ್ ಪಕ್ಷದ ಉಪಸಮಿತಿಯ ಸಂಚಾಲಕರು ಮುಂದಿನ ಚುನಾವಣೆಗಳನ್ನು ಎದುರಿಸುವ ನಿಟ್ಟಿನಲ್ಲಿ ಯುವ ಪ್ರತಿಭಾವಂತ ನಾಯಕರನ್ನು ಪಕ್ಷದತ್ತ ಸೆಳೆಯಬೇಕಾದ ಅಗತ್ಯವಿದೆ. ಅದಕ್ಕಾಗಿ ಪಕ್ಷವು ಕೆಲವು ಶಿಫಾರಸುಗಳನ್ನು ಅಳವಡಿಸಿಕೊಳ್ಳಬೇಕು ಎಂಬುದಾಗಿ ಸೂಚಿಸಿದ್ದಾರೆ.
ಪಕ್ಷಕ್ಕೆ ಯುವ ಪ್ರತಿಭಾವಂತ ನಾಯಕರನ್ನು ಸೆಳೆಯಬೇಕಿದ್ದರೆ ಹಿರಿಯ ನಾಯಕರ ಕುಟುಂಬಕ್ಕೆ ಒಂದಕ್ಕಿಂತ ಹೆಚ್ಚು ಟಿಕೆಟ್ ನೀಡಬಾರದು. ಇದರಿಂದ ಪ್ರಭಾವಿ ಹಿರಿಯ ನಾಯಕರು ಹೆಚ್ಚು ಟಿಕೆಟ್ ಪಡೆಯುವುದನ್ನು ತಡೆಯಬಹುದು ಹಾಗೂ ಟಿಕೆಟ್ಗಳು ಒಂದೇ ಕಡೆ ಹಂಚಿಕೆ ಆಗುವುದನ್ನೂ ನಿಯಂತ್ರಿಸಬಹುದು ಎಂದು ಶಿಫಾರಸಿನಲ್ಲಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಉಪಸಮತಿಯು ಉದಾಹರಣೆ ಸಮೇತವಾಗಿ ವಿವರಣೆಯನ್ನೂ ನೀಡಿದೆ. ಗೋವಾ ಹಾಗೂ ಉತ್ತರಾಖಂಡ ಚುನಾವಣೆಗಳಲ್ಲಿ ಟಿಕೆಟ್ ನೀಡಿದ್ದನ್ನು ಉಲ್ಲೇಖಿಸಿ, ಹೊಸ ಶಿಫಾರಸಿನ ಮಹತ್ವ ತಿಳಿಸಲಾಗಿದೆ.
ಹಿಂದಿನ ಚುನಾವಣೆಗಳಲ್ಲಿ ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ಮತ್ತು ಅವರ ಪುತ್ರಿಗೂ ಟಿಕೆಟ್ ನೀಡಲಾಗಿತ್ತು. ಆದರೆ ಹರೀಶ್ ಸೋತರು. ಹಾಗೇ ಯಶ್ಪಾಲ್ ಆರ್ಯ ಮತ್ತು ಅವರ ಪುತ್ರ ಸಂಜೀವ್ ಆರ್ಯಗೂ ಟಿಕೆಟ್ ನೀಡಲಾಗಿದ್ದು, ಸಂಜೀವ್ ಸೋತಿದ್ದರು. ಚರಣ್ಜಿತ್ ಸಿಂಗ್ ಚನ್ನಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಎರಡರಲ್ಲೂ ಸೋತರು ಎಂಬ ವಿವರಣೆಯನ್ನು ನೀಡಿದ ಉಪಸಮಿತಿ ಒಂದು ಕುಟುಂಬಕ್ಕೆ ಒಂದು ಟಿಕೆಟ್ ಮಾತ್ರ ನೀಡಬೇಕು ಎಂದು ಆಗ್ರಹಿಸಿದೆ. ಇದರಿಂದ ಯುವ ಪ್ರತಿಭಾವಂತ ನಾಯಕರಿಗೆ ಟಿಕೆಟ್ ನೀಡಲು ಸಾಧ್ಯವಾಗುವ ಮೂಲಕ ಅವರನ್ನು ಪಕ್ಷದತ್ತ ಸೆಳೆಯಬಹುದು ಎಂದು ತಿಳಿಸಿದೆ. ಅಲ್ಲದೆ ಪಕ್ಷದ ಸಾಮಾಜಿಕ ಬುನಾದಿಯನ್ನು ವಿಸ್ತರಿಸಿ ಗಟ್ಟಿಗೊಳಿಸಿಕೊಳ್ಳುವ ಸಲುವಾಗಿ ಎಸ್ಸಿ-ಎಸ್ಟಿ ಮತ್ತು ಒಬಿಸಿಗೂ ಮೀಸಲಾತಿ ನೀಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ ಎಂದು ಮೂಲಗಳು ತಿಳಿಸಿವೆ.