ಬದಿಯಡ್ಕ: ಪುರಾಣಗಳು ಸರಿದು ಹೋಗಿ ಅಡಗಿ ನಿಂತ ಕಾಲ ಇಂದಿನದು. ಯಕ್ಷಗಾನದ ಈ ನೆಲದಲ್ಲಿ ಮತ್ತೆ ನೆಲೆಗೊಳ್ಳುವಂತೆ ಬಿಡುಗಡೆಗೊಂಡ ನಾಲ್ಕೂ ಕೃತಿಗಳೂ ಮಹತ್ತರವಾದುದು. ಯಕ್ಷಗಾನ ಕಲಾ ಪರಂಪರೆ ಸಾಮಾನ್ಯ ಜನರ ಬಳಿ ಕಥಾನಕಗಳು ತಲುಪುವಂತೆ ಮಾಡಿದ್ದರೆ ಡಾ. ಭರಣ್ಯರಿಂದು ಇಂತಹ ಕೃತಿಗಳ ಮೂಲಕ ಅದೇ ಕೆಲಸ ಮಾಡಿದ್ದಾರೆ. ಎಲ್ಲರಿಂದ ವೇದಗಳನ್ನೂ ಅಷ್ಟಾದಶ ಪುರಾಣಗಳನ್ನೂ , ಅಷ್ಟೇ ಉಪ ಪುರಾಣಗಳನ್ನೂ ಆರು ಶಾಸ್ತ್ರ , ತೊಂಬತ್ತಾರು ತತ್ವಗಳನ್ನೂ ಜೀವಮಾನವಿಡೀ ಓದಿದರೂ ಅರಗಿಸಿಕೊಳ್ಳಲಾದೀತೆ? ಪುರಾಣಗಳೂ ಒಂದೇ ಆಗಿ ಉಳಿದಿಲ್ಲ. ವಿಕ್ಟೋರಿಯಾ ರಾಣಿ ಒಮ್ಮೆ ಅಂಥವನ್ನು ಸಮೀಕರಿಸುವ ಸಾಹಸ ಮಾಡಿದ್ದರು. ಅಂತೂ ಜನರ ಬಳಿಗೆ ಸದ್ವೃತ್ತಾಂತಗಳು ತಲುಪಲಿಕ್ಕಿರುವ ಇಂಥ ಉಪಾಧಿಗಳು ಓದುಗರಿಂದ ಸ್ವೀಕೃತವಾಗಬೇಕು ಎಂದು ಹಿರಿಯ ವಿದ್ವಾಂಸ, ಯಕ್ಷಗಾನ ಅರ್ಥಧಾರಿ ಬೆಳ್ಳಿಗೆ ನಾರಾಯಣ ಮಣಿಯಾಣಿ ಅವರು ತಿಳಿಸಿದರು.
ಇತ್ತೀಚೆಗೆ ನೀರ್ಚಾಲು ಮಹಾಜನ ಸಂಸ್ಕøತ ಕಾಲೇಜು ಹೈಯರ್ ಸೆಕೆಂಡರಿ ಶಾಲಾ ವಠಾರದಲ್ಲಿ ಸಿರಿಚಂದನ ಯುವ ಬಳಗ ಕಾಸರಗೋಡು ಹಾಗೂ ಮಹಾಜನ ವಿದ್ಯಾವರ್ಧಕ ಸಂಘದ ಜಂಟಿ ಆ|ಶ್ರಯದಲ್ಲಿ ನಡೆದ ಮಧುರೈ ಕಾಮರಾಜ ವಿಶ್ವ ವಿದ್ಯಾಲಯದ ವಿಶ್ರಾಂತ ಕನ್ನಡ ವಿಭಾಗ ಮುಖ್ಯಸ್ಥ, ಹಿರಿಯ ಲೇಖಕ ಡಾ.ಹರಿಕೃಷ್ಣ ಭರಣ್ಯ ಅವರ ವ್ಯೂಹ , ಭಾರ್ಗವ ಶಾರ್ದೂಲ , ವಿನಾಶ ಕಾಲೇ ಮತ್ತು ಕಾಲಚಕ್ರ ಎಂಬ ನಾಲ್ಕು ಪುಸ್ತಕಗಳಲ್ಲಿ ಎರಡನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಉಳಿದ ಎರಡು ಕೃತಿಗಳನ್ನು ಬಿಡುಗಡೆಗೊಳಿಸಿದ ಚಿತ್ರಕಲಾವಿದೆ, ಸಾಹಿತಿ ಶಶಿಕಲಾ ಬಾಯಾರು ಅವರು ಮಾತನಾಡಿ ಮರ ಎಷ್ಟೇ ಹಳೆತಾದರೂ ಮತ್ತೆ ಮತ್ತೆ ಅದಕ್ಕೆ ವಸಂತ ಬರುವಂತೆ ಭರಣ್ಯರ ಬರೆಹ ಸೆಳೆಯುತ್ತಿದೆ . ಸರಳ ಸುಂದರ ನಿರಾಳದಲ್ಲಿ ಓದಿಸುವ ಅವರ ಕೃತಿಗಳು ಸ್ನೇಹದ ಬಯಲಾಗಿ ನಿಂತಿರುವ ಅವರ ವ್ಯಕ್ತಿತ್ವದ ಪ್ರತೀಕಗಳು ಎಂದರು.
ಈ ಸಂಭ್ರಮಕ್ಕೆ ಮಹಾಜನ ವಿದ್ಯಾಸಂಸ್ಥೆಗಳ ಅಧ್ಯಕ್ಷ ಜಯದೇವ ಖಂಡಿಗೆ ಅವರು ದೀಪಹಚ್ಚಿ ಉದ್ಘಾಟಿಸಿ ಚಾಲನೆ ನೀಡಿದರು.
ಕಾಸರಗೋಡು ಸರ್ಕಾರಿ ಕಾಲೇಜಿನ ನಿವೃತ್ತ ಪ್ರಾಧ್ಯಾಪಕಿ ಡಾ ಯು ಮಹೇಶ್ವರಿ ಅವರು " ವಿನಾಶ ಕಾಲೇ" ಕೃತಿ, ಭಾರ್ಗವ ವಿಜಯ ಮತ್ತು ರೇಣುಕೆಯ ಸ್ವಗತ ಕೃತಿಗಳನ್ನು ಪ್ರಾಧ್ಯಾಪಕ ಡಾ ರತ್ನಾಕರ ಮಲ್ಲಮೂಲೆ ಹಾಗೂ ವ್ಯೂಹ ಕಾದಂಬರಿಯನ್ನು ಕಾದಂಬರಿಕಾರ , ಲೇಖಕ ತೆಕ್ಕುಂಜ ಕುಮಾರ ಸ್ವಾಮಿ ಅವರು ವಿಮರ್ಶೆ ನಡೆಸಿ ಪುಸ್ತಕದ ಬಗ್ಗೆ ಪರಿಚಯ ನೀಡಿದರು.
ಲೇಖಕ ಹರಿಕೃಷ್ಣ ಭರಣ್ಯ ಅವರು ಪ್ರತಿಕ್ರಿಯಿಸುತ್ತ , ತನ್ನ ಬಾಲ್ಯದ ಅನುಭವಗಳು ಈ ಪರಿಸರದಿಂದ ದಕ್ಕಿದ ಜ್ಞಾನ ಮುಂದೆ 2010 ರಲ್ಲಿ ನಿವೃತ್ತನಾದ ಮೇಲೆ ಅಧ್ಯಯನಕ್ಕೆ ಗಮನ ಕೊಟ್ಟರೀತಿ , ಕೋವಿಡ್ ಭಯದಿಂದ ಮನೆಯೊಳಗೇ ಇದ್ದಾಗ ಬರೆಹಕ್ಕೆ ವೇಗ ಸಿಕ್ಕಿದ್ದರಿಂದಾದ ಅನುಕೂಲತೆಗಳು , ದಶಕಗಳಿಂದ ವರ್ಷಕ್ಕೊಂದೆಂಬಂತೆ ಕೃತಿ ಪ್ರಕಟಣೆ ಮಾಡಿ ಇದೀಗ ಸಂಖ್ಯೆ ಐವತ್ತಕ್ಕೆ ತಲುಪುತ್ತಿರುವ ವಿಚಾರ ಹಂಚಿಕೊಂಡರು.
ಸಂಸ್ಮರಣ ಕಾರ್ಯಕ್ರಮ:
ಈ ಸಂದರ್ಭ ಪ್ರೊ. ಸುಬ್ರಾಯ ಭಟ್ಟರ ಶತಮಾನದ ನೆನಪಿನ ಕಾರ್ಯಕ್ರಮ ಜೊತೆಗೆ ಆಯೋಜಿಸಲ್ಪಟ್ಟಿತ್ತು. ಎರಡೂ ಕಾರ್ಯಕ್ರಮಗಳ ಅಧ್ಯಕ್ಷತೆ ಡಾ . ಪ್ರಮೀಳಾ ಮಾಧವ ವಹಿಸಿದ್ದರು. ಸಂಸ್ಮರಣಾ ಸಂದರ್ಭದಲ್ಲಿ ಸುಬ್ರಾಯ ಭಟ್ಟರ ಪುತ್ರಿ, ಶಿಕ್ಷಕಿ ವಾಣಿ ಪಿ.ಎಸ್. ಅವರು ತನ್ನ ಏಳನೇ ವಯಸ್ಸಿನಲ್ಲಿ ಮರೆಯಾದ ತಂದೆಯ ಸಮಗ್ರ ವ್ಯಕ್ತಿತ್ವದ ಬಿಂಬ ಅವರ ಬಂಧು ಮಿತ್ರರು, ಶಿಷ್ಯರು, ಓರಗೆಯ ಸಾಹಿತಿಗಳ ಮೂಲಕ ದೊರಕುತ್ತಿರುವುದಕ್ಕೆ ಅಂತಹ ಎಲ್ಲರಿಗೆ ಆಭಾರಿಯಾಗಿರುವುದಾಗಿ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಡಾ. ಪ್ರಮೀಳಾ ಮಾಧವ ಅವರು ಮಾತನಾಡಿ ಸದಾ ತನ್ನ ವಿದ್ಯಾರ್ಥಿಗಳ ಉನ್ನತಿಯನ್ನು ಬಯಸುತ್ತಿದ್ದ ಸುಬ್ರಾಯ ಭಟ್ಟರು ತನ್ನ ಕುರಿತು ವಹಿಸಿದ ಕಾಳಜಿಯ ಪರಿಚಯವನ್ನೂ ಮಾಡಿಸಿದರು. ಅವರು ಶಿಸ್ತಿನ ಶಿಕ್ಷಕ . ಸಮಯ ಪ್ರಜ್ಞೆಗೆ ಹೆಸರಾದವರು . ಕನ್ನಡವನ್ನು ಐಚ್ಛಿಕ ವಿಷಯವಾಗಿ ತೆಗೆಯುವ ಹಾಗೆ ನನ್ನನ್ನು ಪ್ರೇರೇಪಿಸಿದ್ದು ಅವರ ಮುಂದಾಲೋಚನೆಯ ಫಲಶ್ರುತಿ . ಪ್ರಥಮ ರ್ಯಾಂಕು ಪಡೆದು ಅಂದು ತಿಂಗಳಿಗೆ ನೂರು ರೂಪಾಯಿಗಳ ವಿದ್ಯಾರ್ಥಿ ವೇತನ ಪಡೆಯುವಂತಾದ್ದು ಅವರಿಂದ. ಅವರು ಕಾಟಾಚಾರಕ್ಕೆ ಪಾಠ ಮಾಡಿದವರಲ್ಲ. ಸಾಹಿತ್ಯವನ್ನು ಮಾವಿನ ಹಣ್ಣಿನಂತೆ ಕೊನೆ ತೊಟ್ಟಿನ ತನಕ ಚೀಪುವ ಮರ್ಮ ಹೇಳಿಕೊಟ್ಟವರು ಎಂದರು . ಅವರ ಮಾತುಗಳು ಒಂದು ಕಾಲದ ಗುರು ಶಿಷ್ಯ ಸಂಬಂಧ , ಸಹಜ ಸಾಹಿತ್ಯ ಪರಿಚರ್ಯೆ , ಹೊರ ಜಗತ್ತಿನಲ್ಲಿ ಮೆಲ್ಲನೆ ಕಣ್ಣೊಡೆಯುತ್ತಿದ್ದ ಅಶಿಸ್ತು , ಅವೆಲ್ಲವನ್ನ ಮೀರಿ ವಿದ್ಯಾ ಧನಂ ಸರ್ವಧನ ಪ್ರಧಾನಂ ಎಂದು ಕಂಡುಕೊಳ್ಳುವುದಕ್ಕೆ ಸಾಧ್ಯವಾದ ಸನ್ನಿವೇಶಗಳ ಸುತ್ತಲೂ ಇದ್ದುವು ಎಂದು ಬೊಟ್ಟುಮಾಡಿದರು.
ಸಿರಿ ಚಂದನ ವೇದಿಕೆಯ ಅಧ್ಯಕ್ಷ ಕಾರ್ತಿಕ್ ಪಡ್ರೆ ಶುಭ ಹಾರೈಸಿದರು. ಸ್ನೇಹಲತಾ ದಿವಾಕರ್ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಮುಖ್ಯೋಪಾಧ್ಯಾಯ ಎಂ ಕೆ ಶಿವ ಪ್ರಕಾಶ್ ವಂದಿಸಿದರು.