ಮುಂಬೈ: ಕಂಟೈನರ್ ಟ್ರಕ್ ಒಂದು ಸೇತುವೆ ಕೆಳಗಡೆ ಸಿಲುಕಿದ ವಿರಳಾತಿ ವಿರಳ ಘಟನೆ ಮುಂಬೈನ ಕಿಂಗ್ ಸರ್ಕಲ್ ರೈಲ್ವೆ ಸೇತುವೆಯಲ್ಲಿ ನಡೆದಿದೆ.
ಟ್ರಕ್ ಚಾಲನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆಗೆಂದು ಮಾತುಂಗ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ. ಚಾಲಕನಿಗೆ ಸೇತುವೆಯ ಎತ್ತರದ ಬಗ್ಗೆ ತಿಳಿಯದೇ ವಾಹನ ಚಲಾಯಿಸಿದ್ದರಿಂದ ಸೇತುವೆ ಅಡಿಗೆ ಸಿಲುಕಿರುವುದಾಗಿ ತಿಳಿದುಬಂದಿದೆ.
ಈ ಬಗ್ಗೆ ಮಾತನಾಡಿರುವ ಟ್ರಕ್ ಚಾಲಕ ಕಿಶನ್, ಟ್ರಕ್ ದೆಹಲಿಯಿಂದ ಬರುತ್ತಿತ್ತು. ನಾನು ಇದೇ ಮೊದಲ ಬಾರಿಗೆ ಈ ರಸ್ತೆಯಲ್ಲಿ ಚಾಲನೆ ಮಾಡುತ್ತಿದ್ದೆ, ಆದ್ದರಿಂದ ಸೇತುವೆಯ ಎತ್ತರವನ್ನು ತಕ್ಷಣಕ್ಕೆ ತಿಳಿಯಲು ಆಗಲಿಲ್ಲ ಎಂದು ಹೇಳಿದ್ದಾನೆ.
ಘಟನೆಗೆ ಸಂಬಂಧಿಸಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸೇತುವೆ ಕೆಳಗೆ ನುಗ್ಗಿದ ಟ್ರಕ್ ಅಲ್ಲಿಯೇ ಸಿಲುಕಿದ್ದು, ಕಂಟೈನರ್ ಜಖಂ ಆಗಿರುವುದನ್ನು ಫೋಟೋದಲ್ಲಿ ಕಾಣಬಹುದಾಗಿದೆ. ಇನ್ನು ಕಿಂಗ್ಸ್ ಸರ್ಕಲ್ ಸೇತುವೆಯ ಕೆಳಗೆ ಟ್ರಕ್ ಸಿಲುಕಿಕೊಂಡಿರುವುದು ಇದೇ ಮೊದಲಲ್ಲ. ಈ ಹಿಂದೆಯು ಇಂತಹ ಘಟನೆ ನಡೆದಿದೆ.
ಕಿಂಗ್ಸ್ ಸರ್ಕಲ್ ರೈಲ್ವೆ ಸೇತುವೆಯನ್ನು ಸಿಯಾನ್ ಆಸ್ಪತ್ರೆಯಿಂದ ಮಾತುಂಗಾ ಮತ್ತು ದಾದರ್‌ಗೆ ಹೋಗುವ ರಸ್ತೆಯಲ್ಲಿ ನಿರ್ಮಿಸಲಾಗಿದೆ. ಕೆಲವು ಟ್ರಕ್ ಅಥವಾ ದೊಡ್ಡ ಕಂಟೈನರ್ ಸಿಕ್ಕಿಹಾಕಿಕೊಳ್ಳುವುದು ಬಹುತೇಕ ಪ್ರತಿ ವರ್ಷವು ವರದಿಯಾಗುತ್ತಿರುತ್ತದೆ.