ಕೊಲ್ಲಂ: ಬಾಳಿ ಬದುಕಬೇಕಾದ ಹಾಗೂ ಅನೇಕರ ಬದುಕಿನ ಆಶಾಕಿರಣವಾಗಿದ್ದ ಕೇರಳದ ಯುವ ವೈದ್ಯೆ ವಿಸ್ಮಯ ನಾಯರ್ ಆತ್ಮಹತ್ಯೆ ಪ್ರಕರಣ ಇಡೀ ಕೇರಳದಲ್ಲಿ ಭಾರೀ ಸಂಚಲನ ಸೃಷ್ಟಿಸಿತ್ತು. ಈ ಪ್ರಕರಣದಲ್ಲಿ ಬಂಧನವಾಗಿದ್ದ ಪತಿ ಕಿರಣ್ ಕುಮಾರ್ ಇದೀಗ ಜಾಮೀನಿನ ಮೇಲೆ ಹೊರಗಡೆ ಇದ್ದಾನೆ.
ಪ್ರೊಫೈಲ್ನಲ್ಲಿ ವಿಸ್ಮಯ ಫೋಟೋ ಹಾಕಿ ವಿಸ್ಮಯ ವಿಜಿತ್ ಹೆಸರಿನಲ್ಲಿ ಫೇಸ್ಬುಕ್ ಖಾತೆ ತೆರೆಯಲಾಗಿದೆ. ಈ ಖಾತೆಯಲ್ಲಿ 800 ಮಂದಿ ಸ್ನೇಹಿತರಿದ್ದಾರೆ. ಆದರೆ, ವಿಸ್ಮಯ ಸಹೋದರ ವಿಜಿತ್ ಆಗಲಿ ಅಥವಾ ಅತ್ತಿಗೆ ರೇವತಿಯಾಗಲಿ ಫ್ರೆಂಡ್ಸ್ ಲೀಸ್ಟ್ನಲ್ಲಿ ಇಲ್ಲ. ಈ ಖಾತೆಯಿಂದ ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸಿದ ಬೆನ್ನಲ್ಲೇ ಶಾಕ್ ಆದ ಸಂಬಂಧಿಕರು ಕೂಡಲೇ ಠಾಣೆಗೆ ದೌಡಾಯಿಸಿ ದೂರು ದಾಖಲಿಸಿದ್ದಾರೆ.
ವಿಸ್ಮಯ ಪ್ರಕರಣದ ವಿಚಾರಣೆ ವೇಳೆ ವಿಸ್ಮಯ ತಂದೆ ನಿರ್ವಹಿಸದ ಇನ್‌ಸ್ಟಾಗ್ರಾಂ ಖಾತೆಯ ಬಗ್ಗೆ ನ್ಯಾಯಾಲಯದಲ್ಲಿ ವಾದ ಮಂಡಿಸಲಾಗಿದೆ. ಇದೇ ಆಧಾರದಲ್ಲಿ ಸಂಬಂಧಿಕರು ಕೂಡ ದೂರು ದಾಖಲಿಸಿದ್ದಾರೆ. ಇದೀಗ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವ ಕೇರಳ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಕೊಲ್ಲಂನ ಒಂದನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದಲ್ಲಿ ವಿಸ್ಮಯ ಆತ್ಮಹತ್ಯೆ ಪ್ರಕರಣದ ವಿಚಾರಣೆ ಪೂರ್ಣಗೊಂಡಿದ್ದು, ಇದೇ ತಿಂಗಳ 23ರಂದು ತೀರ್ಪು ಹೊರಬೀಳಲಿದೆ. ಈ ಪ್ರಕರಣದ ಹಿನ್ನೆಲೆಯನ್ನು ನೋಡುವುದಾದರೆ, ವಿಸ್ಮಯ ಆತ್ಮಹತ್ಯೆ ಪ್ರಕರಣ ಇಡೀ ಕೇರಳದಲ್ಲಿ ಭಾರೀ ಸಂಚಲನ ಸೃಷ್ಟಿಸಿತ್ತು. ಗಂಡ ಕಿರಣ್ ಕುಮಾರ್ ಹಣ ದಾಹಕ್ಕೆ ಯುವ ವೈದ್ಯೆ ಸಾವಿನ ಹಾದಿ ಹಿಡಿದಳು. ಅದಕ್ಕೂ ಮುಂಚೆ ಗಂಡನ ಅಸಲಿ ಮುಖವಾಡವನ್ನು ಮೃತ ವೈದ್ಯೆ ಬಿಚ್ಚಿಟ್ಟಿದ್ದಳು. ಅಷ್ಟಕ್ಕೂ ಆಕೆಯ ಗಂಡ ಅನಾಗರಿಕನೇನಲ್ಲ. ಆದರೆ, ಆತ ಮಾಡಿದ ಕೆಲಸ ಮಾತ್ರ ನಾಗರಿಕ ಸಮಾಜ ತಲೆತಗ್ಗಿಸುವಂಥದ್ದು, ವೃತ್ತಿಯಲ್ಲಿ ಕೇರಳದ ಮೋಟಾರು ವಾಹನ ವಿಭಾಗದ ಅಧಿಕಾರಿಯಾಗಿದ್ದ. ಒಳ್ಳೆಯ ಉದ್ಯೋಗ, ಕೈತುಂಬ ಸಂಬಳ ಪಡೆಯುತ್ತಿದ್ದರೂ ಆತನ ಅತಿಯಾದ ದುರಾಸೆ ಯುವ ವೈದ್ಯೆಯ ಪ್ರಾಣವನ್ನೇ ಕಸಿದುಕೊಂಡಿತು. ಅದಕ್ಕೆ ಶಿಕ್ಷೆಯಾಗಿ ಕೇರಳ ಸರ್ಕಾರ ಆರೋಪಿಯ ಸರ್ಕಾರಿ ಕೆಲಸವನ್ನೇ ಕಸಿದುಕೊಂಡು ಕಂಬಿ ಹಿಂದೆ ತಳ್ಳಿತ್ತು.
2020ರ ಮೇ ತಿಂಗಳಲ್ಲಿ ವಿಸ್ಮಯ ಮತ್ತು ಕಿರಣ್ ಇಬ್ಬರು ಮದುವೆ ಆಗಿದ್ದರು. ವಿಸ್ಮಯಳ ಮದುವೆಯನ್ನ ಕುಟುಂಬಸ್ಥರು ಅದ್ದೂರಿಯಾಗಿ ಮಾಡಿಕೊಟ್ಟಿದ್ದರು. ದಂಪತಿ ಇಬ್ಬರೂ ಕೇರಳದ ಕೊಲ್ಲಂನಲ್ಲಿ ವಾಸವಿದ್ದರು. ಆದರೆ, ಗಂಡನ ಹಣದಾಹ ಮತ್ತು ಕಿರುಕುಳ ಸಹಿಸದೇ 2021 ಜೂನ್ 21ರ ಸೋಮವಾರ ಬೆಳಗ್ಗೆ ಗಂಡನ ಮನೆಯಲ್ಲಿಯೇ ವಿಸ್ಮಯ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ದೇಹದ ಮೇಲೆ ಗಾಯದ ಗುರುತುಗಳಾಗಿತ್ತು. ಗಂಡನ ಹಣದಾಹಕ್ಕೆ ವಿಸ್ಮಯ ಬಲಿಯಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿತ್ತು. ಸಾವಿಗೂ ಮುನ್ನ ಅಂದರೆ ಭಾನುವಾರ ರಾತ್ರಿ ವಾಟ್ಸ್‌ಆಯಪ್ ಮತ್ತು ಫೇಸ್ಬುಕ್ನಲ್ಲಿಯೂ ಸೋದರ ಸಂಬಂಧಿ ಜತೆ ಚಾಟ್ ಮಾಡಿದ್ದ ವಿಸ್ಮಯ, ಬಹುಶಃ ಇದೇ ನನ್ನ ಕೊನೇ ಮೆಸೇಜ್ ಆಗಬಹುದು. ಗಂಡನ ಕಿರುಕುಳ ಸಹಿಸಲಾಗ್ತಿಲ್ಲ ಎಂದು ಹೇಳಿದ್ದರು. ಗಂಡ ಹಿಂಸೆ ನೀಡಿರುವ ಕೆಲವು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದರು.