ಚೆನ್ನೈ: ಇಂಧನ ದರಗಳ ವ್ಯಾಟ್ ತಗ್ಗಿಸುವಂತೆ ಕೇಂದ್ರ ಸರ್ಕಾರ ಮಾಡಿರುವ ಮನವಿಗೆ ವಿರೋಧ ವ್ಯಕ್ತಪಡಿಸಿರುವ ತಮಿಳುನಾಡು ಸರ್ಕಾರ, ಬೆಲೆ ಏರಿಕೆ ಮಾಡುವಾಗ ನಮ್ಮನ್ನು ಕೇಳಲಿಲ್ಲ.. ಈಗ ಬೆಲೆ ಇಳಿಸಿ ಎಂದು ಕೇಳುವುದೇಕೆ? ಎಂದು ಕಿಡಿಕಾರಿದೆ.
ಹಣದುಬ್ಬರ ನಿಯಂತ್ರಿಸಲು ಮತ್ತು ಅಗತ್ಯ ವಸ್ತುಗಳ ದರ ಏರಿಕೆ ತಡೆಯುವ ಉದ್ದೇಶದಿಂದ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಎಕ್ಸೈಸ್ ಸುಂಕವನ್ನು ಪ್ರತಿ ಲೀಟರಿಗೆ ಕ್ರಮವಾಗಿ 8ರೂ ಮತ್ತು 6ರೂ ಕಡಿತ ಮಾಡಿರುವುದಾಗಿ ಕೇಂದ್ರ ಸರ್ಕಾರವು ಶನಿವಾರ ಹೇಳಿತ್ತು. ಅಲ್ಲದೇ ರಾಜ್ಯ ಸರ್ಕಾರಗಳೂ ಕೂಡ ವ್ಯಾಟ್ ತಗ್ಗಿಸುವಂತೆ ಮನವಿ ಮಾಡಿತ್ತು. ‘ಎಲ್ಲಾ ರಾಜ್ಯ ಸರ್ಕಾರಗಳೂ ಅದರಲ್ಲಿಯೂ ವಿಶೇಷವಾಗಿ 2021ರ ನವೆಂಬರ್‌ನಲ್ಲಿ ತೆರಿಗೆ ಕಡಿತ ಮಾಡದ ರಾಜ್ಯಗಳು, ಕೇಂದ್ರ ಸರ್ಕಾರದ ರೀತಿಯಲ್ಲಿಯೇ ತೆರಿಗೆ ಕಡಿತ ಮಾಡಿ, ಸಾಮಾನ್ಯ ಜನರಿಗೆ ಬೆಲೆ ಏರಿಕೆಯಿಂದ ತುಸು ನೆಮ್ಮದಿ ನೀಡುವಂತೆ ನಾನು ಒತ್ತಾಯಿಸಲು ಬಯಸುತ್ತೇನೆ’ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆಗ್ರಹಿಸಿದ್ದರು.
ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ರಾಜ್ಯಗಳೂ ಕಡಿಮೆ ಮಾಡಬೇಕು ಎಂಬುದರ ಹಿಂದಿನ ತರ್ಕವನ್ನು ತಮಿಳುನಾಡಿನ ಹಣಕಾಸು ಸಚಿವ ಪಳನಿವೇಲ್ ತ್ಯಾಗರಾಜನ್ ಅವರು ಶನಿವಾರ ಪ್ರಶ್ನಿಸಿದ್ದು, ಬೆಲೆ ಏರಿಕೆ ಮಾಡುವಾಗ ನಮ್ಮನ್ನು ಕೇಳಲಿಲ್ಲ.. ಈಗ ಬೆಲೆ ಇಳಿಸಿ ಎಂದು ಕೇಳುವುದೇಕೆ? ಎಂದು ಕಿಡಿಕಾರಿದ್ದಾರೆ.
2016ರಲ್ಲಿ ರಾಜಕೀಯಕ್ಕೆ ಪದಾರ್ಪಣೆ ಮಾಡುವುದಕ್ಕೂ ಮೊದಲು ಬ್ಯಾಂಕರ್ ಆಗಿದ್ದ ತ್ಯಾಗರಾಜನ್, ತಮಿಳುನಾಡಿನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ರಾಜ್ಯ ತೆರಿಗೆ ಕಡಿತ ಮಾಡುವ ಪ್ರಸ್ತಾವವಿಲ್ಲ ಎಂದು ಹೇಳಿದ್ದಾರೆ. ರಾಜ್ಯಗಳು ತೆರಿಗೆ ಕಡಿಮೆ ಮಾಡಬೇಕೆಂದು ನಿರೀಕ್ಷಿಸುವುದು ನ್ಯಾಯವಲ್ಲ, ಸಮಂಜಸವೂ ಅಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.
2014 ರಿಂದ ಈ ವರೆಗೆ ಲೀಟರ್ ಪೆಟ್ರೋಲ್ ಮೇಲೆ 23 ರೂ (+250%) ಮತ್ತು ಡೀಸೆಲ್ ಮೇಲೆ 29 ರೂ (+900%) ರಷ್ಟು ತೆರಿಗೆಯನ್ನು ಕೇಂದ್ರ ಏರಿಸಿದೆ. ಆಗ ರಾಜ್ಯಗಳಿಗೆ ತಿಳಿಸಲೂ ಇಲ್ಲ, ಅಭಿಪ್ರಾಯ ಕೇಳಲೂ ಇಲ್ಲ. 2014ರಿಂದ ಈ ವರೆಗಿನ ಒಟ್ಟು ಹೆಚ್ಚಳದಲ್ಲಿ ಶೇ 50% ರಷ್ಟನ್ನು ಈಗ ಕಡಿತ ಮಾಡಿ, ರಾಜ್ಯಗಳಿಗೂ ಹಾಗೇ ಮಾಡಲು ಪ್ರಚೋದಿಸಲಾಗುತ್ತಿದೆ. ಇದೇನಾ ಒಕ್ಕೂಟ ವ್ಯವಸ್ಥೆ? ಎಂದು ತ್ಯಾಗರಾಜನ್ ಪ್ರಶ್ನೆ ಮಾಡಿದ್ದಾರೆ.
ಅಲ್ಲದೆ ‘ಕೇಂದ್ರ ಸರ್ಕಾರವು ಇಂಧನದ ಮೇಲಿನ ತೆರಿಗೆಯನ್ನು ಕಡಿಮೆ ಮಾಡುವುದಕ್ಕೂ ಮೊದಲೇ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ನೇತೃತ್ವದ ಡಿಎಂಕೆ ಸರ್ಕಾರವು 2021ರ ಆಗಸ್ಟ್ ನಲ್ಲಿ ಪೆಟ್ರೋಲ್ ಬೆಲೆಯನ್ನು 3ರೂ ಕಡಿತಗೊಳಿಸಿದೆ’ ಎಂದು ಹೇಳಿದರು.